ಮೆಸ್ಕಾಂ ಉಪವಿಭಾಗ ಮತ್ತು ಶಾಖಾ ಕಚೇರಿ ಕಟ್ಟಡ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಶಿಲಾನ್ಯಾಸ ನೆರವೇರಿಸಿದರು. ಉಮಾನಾಥ ಶೆಟ್ಟಿ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಕರುಣಾಕರ ವಿ., ಗೋವಿಂದ ರಾಜ್ ಉಪಸ್ಥಿತರಿದ್ದರು.
- ಅಶೋಕ್ ಕುಮಾರ್ ರೈ ಮಾಹಿತಿ
- ೩.೫೦ ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ
ವಿಟ್ಲ: ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರು ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ವಿಟ್ಲ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ೯೪ ಕೋಟಿ ರೂ., ಮಾಣಿಲ ಸೇತುವೆಗೆ ೨೬ ಕೋಟಿ ರೂ. ಅನುದಾನವನ್ನು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಘೋಷಿಸಿದೆ. ಇಲ್ಲಿಯವರೆಗೆ ಮಠ-ಮಂದಿರಕ್ಕೆ ಯಾವುದೇ ಸರ್ಕಾರ ಹಣ ನೀಡಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪೊನ್ನೊಟ್ಟು ಕೆಪಿಟಿಸಿಎಲ್ ನಿವೇಶನದ ಸಮೀಪ ಮೆಸ್ಕಾಂ ಉಪವಿಭಾಗ ಮತ್ತು ಶಾಖಾ ಕಚೇರಿಗೆ ೩.೫೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಟ್ಟಡಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ನಗರದಲ್ಲಿ ಸೆಟ್ ಬ್ಯಾಕ್ ಬಿಡದವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರೈ, ವಿಟ್ಲ ಮಹಾಯೋಜನೆಯಿಂದ ಭೂಪರಿವರ್ತನೆಗೆ ಎದುರಾಗಿರುವ ಸಮಸ್ಯೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಕಾಮಗಾರಿಯಲ್ಲಿ ಗುಣಮಟ್ಟ ಇಲ್ಲದಿದ್ದರೆ ಸಾರ್ವಜನಿಕರು ತಕ್ಷಣ ನಿಲ್ಲಿಸುವ ಕೆಲಸ ಮಾಡಬೇಕು. ಪಕ್ಷದ ಪದಾಽಕಾರಿಗಳು ಕಾಮಗಾರಿ ಗುಣಮಟ್ಟದ ಬಗ್ಗೆ ನಿಗಾ ಇರಿಸಬೇಕು ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಪಟ್ಟಣ ಪಂಚಾಯಿತಿ ಮುಖ್ಯಾಽಕಾರಿ ಕರುಣಾಕರ ವಿ., ಮೆಸ್ಕಾಂ ಸಹಾಯಕ ನಿರ್ವಾಹಕ ಅಭಿಯಂತ ಗೋವಿಂದ ರಾಜ್ ಉಪಸ್ಥಿತರಿದ್ದರು.
ಹಿರಿಯ ಅಧಿಕಾರಿಗಳಿಗೇ ಮಾಹಿತಿ ಇಲ್ಲ
ಮೆಸ್ಕಾಂ ಉಪ ವಿಭಾಗ ಮತ್ತು ಶಾಖಾ ಕಚೇರಿ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದ ಮಾಹಿತಿ ಮೆಸ್ಕಾಂ ಹಿರಿಯ ಅಽಕಾರಿಗಳಿಗೇ ಗೊತ್ತಿಲ್ಲ. ಹಿರಿಯ ಅಧಿಕಾರಿಗಳಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಹೊಸ ಕಟ್ಟಡವಾ ಎಲ್ಲಿ? ಎಂದು ಕೇಳಿದ್ದರು. ಸ್ಥಳೀಯ ಸಹಾಯಕ ಕಾರ್ಯನಿರ್ವಹಣಾಽಕಾರಿ ಉಸ್ತುವಾರಿಯಲ್ಲಿ ಕಾರ್ಯಕ್ರಮ ನಡೆದಿದೆ.
ಸಾರ್ವಜನಿಕರ ಬೇಡಿಕೆ
ಸರ್ಕಾರಿ ಬಸ್ ನಿಲ್ದಾಣದ ಸಮೀಪದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಮೆಸ್ಕಾಂ ಉಪ ವಿಭಾಗ ಮತ್ತು ಶಾಖಾ ಕಚೇರಿಯನ್ನು ವಿವಿಧ ಕಾರಣ ನೀಡಿ ಚಂದಳಿಕೆ, ಬೊಬ್ಬೆಕೇರಿ ಸೇರಿ ವಿವಿಧ ಕಡೆಯ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸುವ ಪ್ರಯತ್ನ ನಡೆದಿತ್ತು. ಇದಕ್ಕೆ ಗ್ರಾಹಕರು ಹಾಗೂ ರೈತ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸ್ವಂತ ಕಟ್ಟಡಕ್ಕೆ ವರ್ಗಾವಣೆಯಾಗಬೇಕೆಂಬ ನಿಟ್ಟಿನಲ್ಲಿ ಹಿರಿಯ ಅಽಕಾರಿಗಳಿಗೆ ಒತ್ತಡ ಹಾಕಿ, ಕೆಪಿಟಿಸಿಎಲ್ ಪಕ್ಕದಲ್ಲಿ ಜಮೀನು ಗುರುತಿಸಲಾಗಿತ್ತು. ಈ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.