ವಿಟ್ಲ ಉಪವಿಭಾಗ ಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ವಿಟ್ಲ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋವಿಂದರಾಜು, ಮೆಸ್ಕಾಂ ಅಧೀಕ್ಷಕ ಕೃಷ್ಣರಾಜ್, ಸಂತೋಷ್, ಜಂಯತಿ, ಉಮಾನಾಥ ಪೆರ್ನೆ ಇತರರು ಇದ್ದರು.
ದಕ್ಷಿಣ ಕನ್ನಡ

ಅರ್ತಿಂಗ್ ಇಲ್ಲದೆ ಭಾರಿ ತೊಂದರೆ MESCOM

ವಿಟ್ಲ ಉಪವಿಭಾಗ ಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ದೂರು

ವಿಟ್ಲ: ಇಲ್ಲಿನ ಪಂಚಲಿಂಗೇಶ್ವರ ಸಭಾಭವನದಲ್ಲಿ ಬುಧವಾರ ನಡೆದ ವಿಟ್ಲ ಉಪವಿಭಾಗ ಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ವಿದ್ಯುತ್ ಇಲಾಖೆಯ ಲೋಪದೋಷಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಟ್ಲ ನಗರ ಹಾಗೂ ಸುತ್ತಮುತ್ತಲಿನ ಮನೆಗಳು, ಪರಿವರ್ತಕಗಳಲ್ಲಿ ಅರ್ತಿಂಗ್ ವ್ಯವಸ್ಥೆ ಸರಿಯಿಲ್ಲದೆ ತೊಂದರೆಯಾಗುತ್ತಿದೆ. ಪೇಟೆಯಲ್ಲಿ ಅರ್ತ್ ಇಲ್ಲದ ಕಟ್ಟಡಗಳೇ ಹೆಚ್ಚಾಗಿವೆ. ಇವುಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಗ್ರಾಹಕರು ಆಗ್ರಹಿಸಿದರು.

ಗೃಹಜ್ಯೋತಿಗೆ ನೆಟ್‌ವರ್ಕ್ ಸಮಸ್ಯೆ: ಗೃಹಜ್ಯೋತಿ ಯೋಜನೆಯ ಮರು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮನೆ-ಮನೆಗೆ ತೆರಳಿ ನಡೆಸಲಾಗಿಲ್ಲ. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಯನ್ನು ಸರ್ಕಾರಕ್ಕೆ ಇಲಾಖೆಯ ಮೂಲಕ ತಿಳಿಸಬೇಕಿತ್ತು. ಮುದ್ರಿತ ಬಿಲ್‌ಗಳು ಅಳಿಸಿ ಹೋಗುವ ಸಮಸ್ಯೆಯನ್ನೂ ಸರಿಪಡಿಸಿಲ್ಲ. ಟ್ರೀಕಟ್ಟಿಂಗ್ ಬಳಿಕ ಮರದ ಗೆಲ್ಲುಗಳನ್ನು ಚರಂಡಿಗಳಿಗೆ ಹಾಕುವುದರಿಂದ ಚರಂಡಿಗಳೇ ಮುಚ್ಚಿ ಹೋಗುತ್ತಿವೆ ಎಂದು ಗ್ರಾಹಕರು ದೂರಿದರು.

ಕರ್ವೇಲು ಭಾಗದ ವಿದ್ಯುತ್ ಸಮಸ್ಯೆಗೆ ತಕ್ಷಣ ಸ್ಪಂದನೆ ಸಿಗುತ್ತಿಲ್ಲ. ಪ್ರಸ್ತುತ ಮಾಹಿತಿ ಪ್ರಕಾರ ಇದಕ್ಕೆ ಕನಿಷ್ಠ ಎರಡು ವರ್ಷ ಬೇಕಾಗಬಹುದು ಎನ್ನಲಾಗಿದ್ದು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಪೆರ್ನೆ ಸೆಕ್ಷನ್ ಕಚೇರಿಯ ಪ್ರಸ್ತಾವನೆ ಏನಾಗಿದೆ ಎಂದು ಪ್ರಶ್ನಿಸಿದ ಗ್ರಾಪಂ ಮಾಜಿ ಸದಸ್ಯ ನವೀನ್ ಕುಮಾರ್, ಕನಿಷ್ಠ ಕಡತ ಸಂಖ್ಯೆಯನ್ನಾದರೂ ನೀಡಿದರೆ ಸಂಬಂಧಪಟ್ಟವರ ಮೂಲಕ ಕೆಲಸ ಮುಂದುವರಿಸಲು ಅನುಕೂಲವಾಗುತ್ತದೆ ಎಂದರು.

ದೂರುಗಳ ಪರಿಶೀಲನೆ: ಜೂನ್ ತಿಂಗಳ ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟು ೨೯ ದೂರುಗಳು ಬಂದಿದ್ದು, ಈ ಪೈಕಿ ೧೭ ದೂರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಉಳಿದ ೧೨ ಪ್ರಕರಣಗಳು ಬಾಕಿ ಉಳಿದಿದ್ದು, ಶೀಘ್ರ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.

ಮಂಗಳೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಬಂಟ್ವಾಳ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ನಾಯಕ್, ಬಂಟ್ವಾಳದ ಲೆಕ್ಕಾಧಿಕಾರಿ ಚಂದ್ರಶೇಖರ್, ವಿಟ್ಲ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋವಿಂದರಾಜು ಗ್ರಾಹಕರ ಕುಂದುಕೊರತೆಗಳನ್ನು ಆಲಿಸಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ಜಯಂತಿ ಪೂಜಾರಿ ಉಪಸ್ಥಿತರಿದ್ದರು.

೧೦ ವರ್ಷ ಮೀರಿದ ಅಧಿಕಾರಿಗಳ ವರ್ಗಾವಣೆಗೆ ಆಗ್ರಹ

ಆರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಒಂದೇ ಸ್ಥಳದಲ್ಲಿ ೧೦ ವರ್ಷಕ್ಕಿಂತಲೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ವರ್ಗಾವಣೆಯಾದರೂ ಕೆಲವರು ಇ ಮುಂದುವರಿಯುತ್ತಿzರೆ. ಸಭೆಯ ನಿರ್ಣಯಕ್ಕೆ ಬೆಲೆ ಇಲ್ಲವೇ? ಎಂದು ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಪ್ರಶ್ನಿಸಿದರು. ಸುದೀರ್ಘ ಕಾಲ ಒಂದೇ ಕಡೆ ಇರುವುದರಿಂದ ಇಲಾಖೆಯ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಮಾಹಿತಿ ಕೇಳಿದರೆ ಬೆದರಿಕೆ

ಕನ್ಯಾನ ಶಾಖಾ ಕಚೇರಿ ಕಟ್ಟಡ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಕೇಳಿದರೆ ಇಲಾಖೆ ‘ಸಿವಿಲ್ ಕಾಮಗಾರಿ ಪ್ರಕ್ರಿಯೆಯಲ್ಲಿದೆ’ ಎಂದು ಉತ್ತರಿಸಿದೆ. ಹಾಗಿದ್ದರೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಕಚೇರಿ ಪ್ರಾರಂಭಿಸಿದ್ದು ಹೇಗೆ? ಈ ಬಗ್ಗೆ ಮಾಹಿತಿ ಕೇಳಿದರೆ ಕಚೇರಿಗೆ ಬನ್ನಿ ಎಂದು ಹೇಳುವುದು ಎಷ್ಟು ಸರಿ? ಗುತ್ತಿಗೆದಾರರಿಂದ ಬೆದರಿಕೆ ಕರೆಗಳು ಬಂದಿರುವುದು ಯಾಕೆ? ಎಂದು ಮುರುವ ಮಹಾಬಲ ಭಟ್ ಪ್ರಶ್ನಿಸಿದರು.

ಕಟ್ಟಡ ಕಾಮಗಾರಿಗಳನ್ನು ಗಮನಿಸುವುದಕ್ಕೆ ಮೆಸ್ಕಾಂನಲ್ಲಿ ಸಿವಿಲ್ ವಿಂಗ್ ಇದೆ. ೫ ಲಕ್ಷ ರೂ. ಮೇಲ್ಪಟ್ಟ ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆಯ ಮೂಲಕವೇ ನಡೆಸಬೇಕಾಗಿದೆ. ಕನ್ಯಾನ ಶಾಖೆಯ ಕಾಮಗಾರಿ ಬಗ್ಗೆ ಗುತ್ತಿಗೆದಾರರಗೆ ನೋಟಿಸ್ ನೀಡಿದ್ದೇವೆ. ಅಗತ್ಯ ಬಿದ್ದರೆ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೂ ಇಲಾಖೆ ಸಿದ್ಧವಿದೆ.
ಸಂತೋಷ್ ನಾಯಕ್, ಕಾರ್ಯನಿರ್ವಾಹಕ ಇಂಜಿನಿಯರ್, ಬಂಟ್ವಾಳ
ಜಿಲ್ಲೆಗೆ ೩೯೦ ಲೈನ್‌ಮನ್ ನೀಡಲಾಗಿದ್ದು ಈ ಪೈಕಿ ಕೆಲವರು ಇನ್ನೂ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ. ಐಪಿ ಪಂಪ್‌ಸೆಟ್‌ಗೆ ಸಂಪರ್ಕ ಕಡಿತಗೊಳಿಸಲು ಎಲ್ಲೂ ಸೂಚನೆ ನೀಡಿಲ್ಲ. ಮೆಸ್ಕಾಂ ನೆಟ್‌ವರ್ಕ್ ೫೦೦ ಮೀಟರ್‌ಗಿಂತ ದೂರ ಇದ್ದರೆ ಸೋಲಾರ್ ಪಂಪ್‌ಸೆಟ್‌ಗೆ ಹೋಗಬೇಕು. ಅರ್ಜಿ ನೀಡಿದ ಎಲ್ಲರಿಗೂ ಆದ್ಯತೆಯ ಮೇರೆಗೆ ಸಂಪರ್ಕ ನೀಡುತ್ತೇವೆ. ಮನೆಯ ಮಾಲೀಕತ್ವ ಬದಲಾವಣೆಗೆ ನೋಂದಣಿಯಲ್ಲಿ ಮೆಸ್ಕಾಂ ಮೀಟರ್ ನಂಬರ್ ನಮೂದಾಗಿದ್ದರೆ ಅಂತಹ ಪ್ರಕರಣದಲ್ಲಿ ಹೆಸರು ಬದಲಾವಣೆಗೆ ಸಮಸ್ಯೆಯಾಗುತ್ತಿಲ್ಲ.
ಕೃಷ್ಣರಾಜ್, ಮೆಸ್ಕಾಂ ಅಧೀಕ್ಷಕ ಇಂಜಿನಿಯರ್
ಲೈನ್‌ಮನ್ ನೇಮಕಾತಿ ಪ್ರಕ್ರಿಯೆಯಲ್ಲಿ ಮೊದಲು ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಎಲ್ಲರೂ ನಗರ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಹಾಗೇ ಉಳಿಯುತ್ತದೆ. ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ವಿಚಾರದಲ್ಲಿ ಕೃಷಿ ಜಾಗ ಹಾಗೂ ಮನೆ ನಿರ್ಮಾಣ ಜಾಗದ ವಿಚಾರದಲ್ಲಿ ಗೊಂದಲವಿದ್ದು, ಶಾಸಕರು ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಪರಿಹರಿಸಲಿದ್ದಾರೆ.
ಉಮಾನಾಥ ಶೆಟ್ಟಿ ಪೆರ್ನೆ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ