ಆಲಂಕಾರು ಗ್ರಾಪಂ ಅಧ್ಯಕ್ಷೆ ಸುಶೀಲಾ ಕೊಂಡಾಡಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು.
ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಇತರ ಸದಸ್ಯರ ಒಳಬೇಗುದಿ ಕೊನೆಗೂ ಬಯಲುಗೊಂಡಿದೆ. ತಮ್ಮ ಅಧಿಕಾರಾವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಇತರ ಸದಸ್ಯರು ಅಧ್ಯಕ್ಷೆ ಸುಶೀಲಾ ಕೊಂಡಾಡಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅಸಮಾಧಾನ ವ್ಯಕ್ತಪಡಿಸಿದರು.
ಆಲಂಕಾರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆ ಆರಂಭದಲ್ಲಿ ಪಂಚಾಯಿತಿ ಅಧ್ಯಕ್ಷರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಸದಸ್ಯರಾದ ಸದಾನಂದ ಆಚಾರ್ಯ, ಶ್ವೇತಕುಮಾರ್, ವಾರಿಜಾ ಅಧ್ಯಕ್ಷೆಯನ್ನು ತರಾಟೆಗೆ ತೆಗೆದುಕೊಂಡು, ಅಧ್ಯಕ್ಷರ ಮನೆ ಕಾಂಪೌಂಡಿನ ಬಳಿ ಒಳ ಚರಂಡಿಗೆ ಕಾಂಕ್ರೀಟ್ ತಡೆಗೋಡೆಯನ್ನು ಕ್ರಿಯಾ ಯೋಜನೆ ರಚಿಸದೆ ಹಾಗೂ ವಾರ್ಡ್ ಸದಸ್ಯರ ಗಮನಕ್ಕೆ ತಾರದೆ ನಿರ್ಮಿಸಿದ್ದಾರೆ. ಮಂಗಳವಾರ ಕೊಂಡಾಡಿ ಸಾರ್ವಜನಿಕ ಬಸ್ ತಂಗುದಾಣ ಉದ್ಘಾಟನೆಯನ್ನು ವಾರ್ಡ್ ಸದಸ್ಯರ ಗಮನಕ್ಕೆ ತಾರದೆ ಮಾಡಿದ್ದೀರಿ ಇದು ನಿಮ್ಮ ಸ್ವಂತ ನಿರ್ಧಾರ ಅಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಶ್ವೇತ ಕುಮಾರ್ ಧ್ವನಿಗೂಡಿಸಿ, ಚರಂಡಿಗೆ ತಡೆಗೋಡೆ ನಿಮ್ಮ ಮನೆ ಬಳಿಯಲ್ಲೇ ಯಾಕೆ ನಿರ್ಮಾಣ ಮಾಡಬೇಕಿತ್ತು. ಕೊಂಡಾಡಿ ಅಂಗನವಾಡಿ ಶಾಲೆಗೆ ಹೊಗುವ ರಸ್ತೆ ಬಳಿ ಗುಡ್ಡ ಕುಸಿಯುತ್ತಿದೆ, ಅಲ್ಲಿ ನಿರ್ಮಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.
ಉತ್ತರಿಸಿದ ಅಧ್ಯಕ್ಷರು, ಒಳ ಚರಂಡಿಗೆ ತಡೆಗೋಡೆಯನ್ನು ಪಂಚಾಯಿತಿ ಕಾಂಕ್ರೀಟ್ ರಸ್ತೆಗೆ ನಿರ್ಮಿಸಿದ್ದೇನೆ ಹೊರತು ನನ್ನ ಮನೆ ಕಾಂಪೌಂಡಿನ ಒಳಗೆ ನಿರ್ಮಿಸಿಲ್ಲ. ಬಸ್ ತಂಗುದಾಣ ಉದ್ಘಾಟನೆ ವಿಚಾರವನ್ನು ಕಳೆದ ಬಾರಿಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆ ಸಮಯದಲ್ಲಿ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಸಾರ್ವಜನಿಕರನ್ನು ಸೇರಿಸಿಕೊಂಡು ಉದ್ಘಾಟನೆ ಮಾಡಿದ್ದೇನೆ ಎಂದರು. ಆಕ್ಷೇಪಣಾ ಅರ್ಜಿಗೆ ಅಭಿವೃದ್ಧಿ ಅಧಿಕಾರಿ ಸುಜಾತಾ ಕೆ. ಸಮಜಾಯಿಷಿ ನೀಡಿ, ಪಂಚಾಯಿತಿ ಅಧ್ಯಕ್ಷರು ಬಸ್ ತಂಗುದಾಣ ಉದ್ಘಾಟನೆ ಇದೆ ಎಂದು ಕರೆದಿದ್ದು, ಪಿಡಿಒ ಆಗಿ ಹೊಗಿದ್ದೇನೆ ಎಂದರು.
ಇದಕ್ಕೆ ಸದಸ್ಯ ಸದಾನಂದ ಆಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು. ಪಂಚಾಯಿತಿ ಕಾರ್ಯದರ್ಶಿ ವಸಂತ್ ಶೆಟ್ಟಿ ಮಧ್ಯಪ್ರವೇಶಿಸಿ, ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು ಹೊಂದಾಣಿಕೆ ಮಾಡಿಕೊಳ್ಳಿ ಎಂದರು.
ಅಧಕ್ಷರು, ಉಪಾಧ್ಯಕ್ಷರಿಗೆ ಗೌರವಾರ್ಪಣೆ