ARREST 
ದಕ್ಷಿಣ ಕನ್ನಡ

ಎಂಡಿಎಂಎ ವಶ, ಮೂವರು ಆರೋಪಿಗಳ ಬಂಧನ

ಜಿಲ್ಲಾ ಡ್ರಗ್ಸ್ ತಂಡ ನಡೆಸಿದ ಕಾರ್ಯಾಚರಣೆ

ಕಾಸರಗೋಡು: ಜಿಲ್ಲೆಯ ವಿವಿಧೆಡೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದಾರೆ. ನಗರದ ಕರಂದಕ್ಕಾಡ್‌ನಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಎಸ್‌ಐ ವಿಜಯನ್ ಮೇಲೋತ್ ನೇತೃತ್ವದಲ್ಲಿ ಜಿಲ್ಲಾ ಡ್ರಗ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 1.50 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು, ಪಳ್ಳಿಕ್ಕರೆ ಪಳ್ಳಿಪುಳ ನಿವಾಸಿ ಗೋಕುಲ್‌ರಾಜೇಶ್(25) ಎಂಬಾತನನ್ನು ಬಂಧಿಸಿದ್ದಾರೆ. ಬೇರೊಂದು ಪ್ರಕರಣದ ತನಿಖೆಯ ಬಳಿಕ ವಿದ್ಯಾನಗರಕ್ಕೆ ಹಿಂತಿರುಗುತ್ತಿದ್ದ ವೇಳೆ ಕರಂದಕ್ಕಾಡ್ ತಲುಪುತ್ತಿದ್ದಂತೆ ಪೊಲೀಸರನ್ನು ಕಂಡು ಸಂಶಯಾಸ್ಪದ ರೀತಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದು ತಪಾಸಣೆ ನಡೆಸಿದಾಗ ಗೋಕುಲ್‌ರಾಜೇಶ್ ಬ್ಯಾಗ್‌ನಲ್ಲಿ ಎಂಡಿಎಂಎ ಪತ್ತೆಯಾಗಿತ್ತು.

ನೀಲೇಶ್ವರ ಕೋಟಪುರಂ ಸೇತುವೆ ಬಳಿ ನೀಲೇಶ್ವರ ಪೊಲೀಸ್ ಠಾಣೆ ಎಸ್‌ಐ ಸುಮೇಶ್ ಬಾಬು ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಆಗಮಿಸಿದ ಸ್ಕೂಟರನ್ನು ತಡೆದು ತಪಾಸಣೆಗೊಳಪಡಿಸಿದಾಗ ಅದರಲ್ಲಿ 1.5 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಒಯಿಞವಳಪು ಪೂಂಜಾವಿ ನಿವಾಸಿಗಳಾದ ಸಲಾಂ ಖಲೀಲ್(41) ಮತ್ತು ಸದ್ದಾಮ್‌ಹುಸೇನ್ ಆಶಿಕ್(30) ಎಂಬುವರನ್ನು ಬಂಧಿಸಿದ್ದಾರೆ. ಅವರು ಸಂಚರಿಸುತ್ತಿದ್ದ ಸ್ಕೂಟರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮನೆಯ ಹೊರಗೆ ಕರೆದು ಯುವಕನ ಕೊಲೆ ಯತ್ನ

ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪುದುಕೈ ಅಡ್ಡತ್‌ಪರಂಬ ಕುಳಿಕೊಂಡ್ ಹೌಸ್‌ನ ಕೆ.ಅಭಿಲಾಷ್(41)ಎಂಬುವರನ್ನು ಮನೆಯಿಂದ ಹೊರ ಕರೆದು ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನರಿಕ್ಕಾಟ್ ಅರ್ಜುನ್, ಅನೂಪ್, ಕಾವಡಿ ಅಭಿ, ವಿಷ್ಣು ಎಂಬುವರ ವಿರುದ್ಧ ಹೊಸದುರ್ಗ ಪೊಲೀಸರು ಕೊಲೆ ಯತ್ನ ಕೇಸು ದಾಖಲಿಸಿದ್ದಾರೆ. ಇರಿತದಿಂದ ಗಂಭೀರ ಗಾಯಗೊಂಡ ಅಭಿಲಾಷ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಟ್ಸಾೃಪ್‌ನಲ್ಲಿ ಅಭಿಲಾಷ್‌ಗೆ ವಿಡಿಯೋ ಕರೆ ಮಾಡಿ ಬೆದರಿಕೆಯೊಡ್ಡಿದ್ದು, ನಂತರ ಅಭಿಲಾಷ್‌ನ ಮನೆ ಬಳಿ ಬಂದ ಆರೋಪಿಗಳು ಅಭಿಲಾಷ್‌ನನ್ನು ಹೊರಕ್ಕೆ ಕರೆದು ಚಾಕುವಿನಿಂದ ಇರಿದಿರುವ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪೂರ್ವದ್ವೇಷ ಕೃತ್ಯಕ್ಕೆ ಕಾರಣವೆನ್ನಲಾಗಿದೆ.