ARREST 
ದಕ್ಷಿಣ ಕನ್ನಡ

ಮನೆಯೊಳಗೆ ಎಂಡಿಎಂಎ ದಾಸ್ತಾನು, ಯೂಟ್ಯೂಬರ್ ಬಂಧನ

3.61 ಗ್ರಾಂ ಎಂಡಿಎಂಎ ವಶ

ಕಾಸರಗೋಡು: ಮನೆಯೊಳಗೆ ಎಂಡಿಎಂಎ ದಾಸ್ತಾನಿರಿಸಿದ್ದ ಮಧೂರು ನಿವಾಸಿ ಯೂಟ್ಯೂಬರ್ ಒಬ್ಬನನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ‘ಡ್ಯಾನಿಷ್’ ತಂಡ ಹಾಗೂ ಆದೂರು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿ ದೊರೆತ ಖಚಿತ ಸುಳಿವಿನ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯ ಮನೆಯಿಂದ 3.61 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ರೈಲಿನಲ್ಲಿ ಮೊಬೈಲ್ ಕದ್ದ ಆರೋಪಿ ಸೆರೆ

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಕನ ಮೊಬೈಲ್ ಕಳವುಗೈದು ಪರಾರಿಯಾಗಿದ್ದ ಬಿಹಾರದ ಬಸ್‌ಗಢ ನಿವಾಸಿ ಚಂದ್ರಕುವಾರ್ (19) ಎಂಬಾತನನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ಅಂಗಾಡಿಪುರಂ ನಿವಾಸಿ ಅಬ್ದುಲ್ ಮಜೀದ್ ಅವರ 30 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಆ.28ರಂದು ಕಾಸರಗೋಡು- ತಲಶ್ಶೇರಿ ಇಂಟರ್‌ಸಿಟಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಾಞಂಗಾಡು ತಲುಪುವಷ್ಟರಲ್ಲಿ ಕಳವಾಗಿತ್ತು. ಈ ಬಗ್ಗೆ ಮಜೀದ್ ದೂರು ನೀಡಿದ್ದರು. ಟೈಲ್ಸ್ ಕೆಲಸಕ್ಕಾಗಿ ಕೇರಳಕ್ಕೆ ಬಂದಿದ್ದ ಆರೋಪಿ ಮೊವ್ವಲ್‌ನಲ್ಲಿ ವಾಸಿಸುತ್ತಿದ್ದು, ಕಳವಾದ ಮೊಬೈಲ್ ಬಳಸುತ್ತಿದ್ದ ಬಗ್ಗೆ ವಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.