crime 
ದಕ್ಷಿಣ ಕನ್ನಡ

ಎಂಡಿಎಂಎ ಆರೋಪಿ ಬಂಧನ

‘ಡಾನ್‌ಸಾಫ್ ಟೀಂ’ ಹಾಗೂ ಕುಂಬಳೆ ಪೊಲೀಸರು ಜಂಟಿ ಕಾರ್ಯಾಚರಣೆ

ಕಾಸರಗೋಡು: ಮುಟ್ಟಂ ರೈಲ್ವೆ ಗೇಟ್ ಸಮೀಪ ನಿಲ್ಲಿಸಿದ್ದ ಕಾರಿನಲ್ಲಿ 1.8 ಗ್ರಾಂ ಎಂಡಿಎಂಎ ಹಾಗೂ 2,97,500 ರೂ. ನಗದು ವಶಪಡಿಸಿಕೊಂಡಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ಶಿರಿಯ ಬತ್ತೇರಿ ಮಹಲ್‌ನ ಅಬ್ದುಲ್ ಅನ್ಸಾದ್(26) ಎಂಬಾತನನ್ನು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ನಾರ್ಕೋಟಿಕ್ ಸೆಲ್ ‘ಡಾನ್‌ಸಾಫ್ ಟೀಂ’ ಹಾಗೂ ಕುಂಬಳೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಅನ್ಸಾದ್ ವಿರುದ್ಧ ಮಂಜೇಶ್ವರ ಹಾಗೂ ವಿದ್ಯಾನಗರದಲ್ಲಿ ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾರು, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದ್ದು, ಮೊಬೈಲಲ್ಲಿ ಮಾದಕವಸ್ತು ವ್ಯವಹಾರಕ್ಕೆ ಸಂಬಂಧಪಟ್ಟ ಪ್ರಮುಖ ಮಾಹಿತಿಗಳಿರುವ ಶಂಕೆ ಮೇರೆಗೆ ಮೊಬೈಲ್ ಅನ್ನು ಸೈಬರ್ ಸೆಲ್‌ಗೆ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು

ಕಾಸರಗೋಡು: ಸೀತಾಂಗೋಳಿ-ಪೆರ್ಲ ರಸ್ತೆಯ ಮುಗು ಎಂಬಲ್ಲಿ ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ, ಮುಗು ಊಜಂಪದವಿನ ಎಂ.ಟಿ.ಮುಹಮ್ಮದ್ ಅಶ್ರಫ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕಿನಲ್ಲಿ ಪತ್ನಿ ಖೈರುನ್ನಿಸಾ ಅವರನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಅಪಘಾತ ಸಂಭವಿಸಿದೆ. ಪತ್ನಿ ಖೈರುನ್ನಿಸಾ ಗಾಯಗೊಂಡಿದ್ದು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲವು ಪ್ರಕರಣಗಳ ಆರೋಪಿ ಬಂಧನ

ಕಾಸರಗೋಡು: ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಅಜಾನೂರು ತೆಕ್ಕೇಕಡಪ್ಪುರ ನಿವಾಸಿ ಟಿ.ಎಂ.ಸಮೀರ್ ಯಾನೆ ಲಾವಾ ಸಮೀರ್(39) ಎಂಬಾತನನ್ನು ‘ಕಾಪಾ’ ಕಾಯ್ದೆಯಡಿ ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಕುಂಬಳೆ, ಹೊಸದುರ್ಗ, ರಾಜಾಪುರ ಪೊಲೀಸ್ ಠಾಣೆಗಳಲ್ಲಿ 2021ರಿಂದ ದಾಖಲಿಸಲಾದ ಮಾದಕದ್ರವ್ಯ ಪ್ರಕರಣ, ಹತ್ಯೆ ಯತ್ನ, ಎಂಡಿಎಂಎ ಸಾಗಾಟ ಸೇರಿದಂತೆ 5 ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ಜುಲೈ ತಿಂಗಳಲ್ಲಿ 31.2 ಕಿಲೋ ಗಾಂಜಾ ಸಾಗಿಸಿದ ಸಂಬಂಧ ಕುಂಬಳೆ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಿರಂತರ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರಿಂದ 2015 ಮತ್ತು 2025ರಲ್ಲಿ ಜಿಲ್ಲಾಧಿಕಾರಿಯ ನಿರ್ದೇಶನದಂತೆ ಈತನನ್ನು ಕಾಪಾ ಕಾಯ್ದೆಯಡಿ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ನಿರ್ಮಾಣ ಹಂತದ ಮನೆಯಲ್ಲಿ ಕೇಬಲ್ ಕಳವು

ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಇಲೆಕ್ಟ್ರಿಕ್ ವೈಯರ್ ಹಾಗೂ ಕೇಬಲ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಿದ್ಯಾನಗರ ಠಾಣೆ ಎಸ್‌ಐ ವಿಜಯನ್ ಮೇಲೋತ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಪಳ್ಳಿಕ್ಕರೆ ಕಿಳಕ್ಕೇಕರ ತೊಟ್ಟಿ ನಿವಾಸಿ ರತೀಶ್ ಟಿ.ಎಫ್. (36) ಮತ್ತು ಪಳ್ಳಿಕ್ಕರೆ ಕೀಕಾನ ಕೊಟಕ್ಕನ್ನಿ ನಿವಾಸಿ ಕರುಣಾಕರನ್ ಕೆ.ಎ. (64) ಬಂಧಿತರು.

ತೆಕ್ಕಿಲ್ ಬೇವಿಂಜೆಯ ಅರ್ಫಾ ಮಂಜಿಲ್‌ನ ಎಂ.ಟಿ.ಅಬ್ದುಲ್ ಕಬೀರ್ ಎಂಬುವರ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿನ ವೈಯರ್ ಮತ್ತು ಕೇಬಲ್ ಸೇರಿದಂತೆ ಒಟ್ಟು 3 ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಿಡಿಲು ಬಡಿದು ಎರಡು ಜಾನುವಾರುಗಳು ಸಾವು

ಕಾಸರಗೋಡು: ಹೊಸದುರ್ಗ ಬಳಾಲ್‌ನಲ್ಲಿ ಗುರುವಾರ ಸಿಡಿಲು ಬಡಿದು ಎರಡು ಜಾನುವಾರುಗಳು ಸಾವಿಗೀಡಾಗಿವೆ. ಕೊನ್ನಂಜಿಬಾಡ್ ಮಾಕಂ ನಿವಾಸಿ ಬಾಬು ಎಂಬುವರ ಹಟ್ಟಿಯಲ್ಲಿ ಕಟ್ಟಿದ್ದ ದನ ಹಾಗೂ ಕರು ಸಿಡಿಲಿಗೆ ಮೃತಪಟ್ಟಿವೆ. ಮನೆಯವರು ಹಟ್ಟಿಗೆ ಹೋಗಿ ನೋಡಿದಾಗ ಜಾನುವಾರುಗಳು ಸತ್ತುಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಜಿಲ್ಲೆಯ ಮಲೆನಾಡು ಪ್ರದೇಶ ಸೇರಿದಂತೆ ಕಾಸರಗೋಡು ಜಿಲ್ಲಾದ್ಯಂತ ಗುರುವಾರ ಸಿಡಿಲು ಮಿಂಚಿನಿಂದ ಕೂಡಿದ ಬಿರುಸಿನ ಮಳೆಯಾಗಿತ್ತು.

21 ಆಹಾರ ಮಳಿಗೆಗಳಿಗೆ ದಂಡ

ಕಾಸರಗೋಡು: ಆಹಾರ ಸುರಕ್ಷಾ ಮಾನದಂಡ ಉಲ್ಲಂಘಿಸಿ ಚಟುವಟಿಕೆ ನಡೆಸುತ್ತಿದ್ದ 21 ವ್ಯಾಪಾರ ಸಂಸ್ಥೆಗಳಿಗೆ ಆಹಾರ ಸುರಕ್ಷಾ ಇಲಾಖೆ ಅಧಿಕಾರಿಗಳು ದಂಡ ವಿಧಿಸಿ ನೋಟಿಸ್ ನೀಡಿದ್ದಾರೆ. ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಹಲವು ಬಾರಿ ಮರು ಬಳಕೆ ಮಾಡುತ್ತಿದ್ದು, ಇದರಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷಾ ಇಲಾಖೆ ತಪಾಸಣಾ ಕಾರ್ಯ ಆರಂಭಿಸಿದೆ. ಕಾಸರಗೋಡು ಜಿಲ್ಲಾ ಆಹಾರ ಸುರಕ್ಷಾ ಸಹಾಯಕ ಆಯುಕ್ತ ಸಂಗೀತ್ ಎಸ್. ನೇತೃತ್ವದಲ್ಲಿ ತಪಾಸಣೆ ನಡೆಯಿತು. ಕಾಞಂಗಾಡು-ಕಾಸರಗೋಡಿನ ಹೋಟೆಲ್, ಬೇಕರಿ, ರಸ್ತೆ ಬದಿಯ ಫುಡ್ ಸ್ಟಾಲ್ ಕೇಂದ್ರೀಕರಿಸಿ ಕರಿದ ತಿನಿಸು ತಯಾರಿಸುವ ಎಣ್ಣೆಗಳ ಪರಿಶೀಲನೆ ನಡೆಸಲಾಯಿತು.

ಅಪಘಾತದಲ್ಲಿ ತಂದೆ, ಮಗನಿಗೆ ಗಾಯ

ಕಾಸರಗೋಡು: ಉಪ್ಪಳ ಸೋಂಕಾಲು ಮಸೀದಿ ಸನಿಹ ಸ್ಕೂಟರ್ ಮತ್ತು ಕಾರು ಡಿಕ್ಕಿ ಹೊಡೆದ ಪರಿಣಾಮ ಸೋಂಕಾಲು ಕೊಡಂಗೆ ನಿವಾಸಿ ಮೂಸ ಹಾಗೂ ಅವರ ಪುತ್ರ ಸಾದಿಕ್ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಸ ಹಾಗೂ ಸಾದಿಕ್ ಸ್ಕೂಟರ್‌ನಲ್ಲಿ ಉಪ್ಪಳದಿಂದ ಸೋಂಕಾಲ್‌ಗೆ ತೆರಳುತ್ತಿದ್ದಾಗ ಬಾಯಾರಿನಿಂದ ಕೈಕಂಬ ಕಡೆಗೆ ಸಂಚರಿಸುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಕಾರು ಚಾಲಕ ಪಾಣೆಮಂಗಳೂರು ಬೋಳಂಗಡಿ ನಿವಾಸಿಯಾದ ಅಜಿತ್(40) ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.