ಮಹಾನಗರ ಪಾಲಿಕೆ 2026-27ನೇ ಸಾಲಿನ ಬಜೆಟ್‌ನ್ನು ಆಡಳಿತಾಧಿಕಾರಿ ದರ್ಶನ್ ಎಚ್.ವಿ. ಮಂಡಿಸಿದರು.  
ದಕ್ಷಿಣ ಕನ್ನಡ

ಮನಪಾ 156.17 ಕೋಟಿ ರೂ. ಉಳಿಕೆ ಬಜೆಟ್, ದರ್ಶನ್ ಎಚ್.ವಿ. ಮಂಡನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ 2026-27ನೇ ಸಾಲಿನಲ್ಲಿ ಆರಂಭಿಕ ಶುಲ್ಕ ಸೇರಿದಂತೆ 937.69 ಕೋಟಿ ರೂ. ಆದಾಯ ಹಾಗೂ 781.51 ಕೋಟಿ ರೂ. ಖರ್ಚು ನಿರೀಕ್ಷೆ ಮಾಡಿ 156.17 ಕೋಟಿ ರೂ.ಗಳ ಉಳಿಕೆ ಬಜೆಟ್‌ನ್ನು ಗುರುವಾರ ಆಡಳಿತಾಧಿಕಾರಿ ದರ್ಶನ್ ಎಚ್.ವಿ. ಮಂಡಿಸಿದರು.
ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸುಮಾರು ಒಂದು ವರ್ಷ ಕಳೆದಿರುವ ಪಾಲಿಕೆಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಆಡಳಿತಾಧಿಕಾರಿಯಾಗಿದ್ದು, ಪಾಲಿಕೆ ಇತಿಹಾಸದಲ್ಲೇ ಸಂಪುರ್ಣ ಬಜೆಟ್ ಪುಸ್ತಕವನ್ನು ಓದುವ ಮೂಲಕ ಬಜೆಟ್ ಮಂಡಿಸಿದ ಮೊದಲ ಆಡಳಿತಾಧಿಕಾರಿ ಎಂದೆನಿಸಿದರು.
2026-27ನೆ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 90 ಕೋಟಿ ರೂ., ನೀರು ಸರಬರಾಜು ಶುಲ್ಕವಾಗಿ 55 ಕೋಟಿ ರೂ., ಘನತ್ಯಾಜ್ಯ ನಿರ್ವಹಣಾ ಕರ 26 ಕೋಟಿ ರೂ., ಇತರ ಆದಾಯವಾಗಿ 26.48 ಕೋಟಿ ರೂ., ಕಟ್ಟಡ ಪರವಾನಗಿ- ಪ್ರೀಮಿಯಂ ಎಫ್‌ಎಆರ್‌ನಿಂದ 26 ಕೋಟಿ ರೂ., ಮಾರುಕಟ್ಟೆ ಸಾಲ 7.31 ಕೋಟಿ ರೂ., ಬ್ಯಾಂಕ್ ಬಡ್ಡಿ 15 ಕೋಟಿ ರೂ., ಮಾರುಕಟ್ಟೆ, ಇತರ ಬಾಡಿಗೆಯಾಗಿ 5.47 ಕೋಟಿ ರೂ., ರಸ್ತೆ ಕಡಿತ, ಪುನರ್ ನಿರ್ಮಾಣ ಶುಲ್ಕದಿಂದ 3 ಕೋಟಿ ರೂ. ಸೇರಿದಂತೆ ಒಟ್ಟು 337.25 ಕೋಟಿ ರೂ.ಗಳ ಅಂದಾಜು ಆದಾಯವನ್ನು ನಿರೀಕ್ಷಿಸಲಾಗಿದೆ. ರಾಜ್ಯ ಸರ್ಕಾರದಿಂದ ವೇತನ, ಎಸ್‌ಎಫ್‌ಸಿ ಮುಕ್ತ ನಿಧಿ, ಪೌರ ಕಾರ್ಮಿಕರ ನೇರ ಪಾವತಿ ವೇತನ, ಸ್ಟಾೃಂಪ್ ಶುಲ್ಕದ ಸರ್‌ಚಾರ್ಜ್ ಸೇರಿದಂತೆ ವಿವಿಧ ಯೋಜನೆಗಳಿಗೆ ಒಟ್ಟು 199.23 ಕೋಟಿ ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ. ಕೇಂದ್ರದಿಂದ ಅಮೃತ್ 2.0 ಜಲ್ ಹಿ ಅಮೃತ್, ನಲ್ಮ್, ಸ್ವಚ್ಛ ಭಾರತ ಮಿಷನ್, 15ನೆ ಹಣಕಾಸು ಮುಕ್ತ ಅನುದಾನ, 16ನೇ ಹಣಕಾಸು, ಎನ್‌ಜಿಟಿ ಸೇರಿದಂತೆ ಒಟ್ಟು 93.36 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ.