ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ ಒಳರಸ್ತೆಯ ಉದ್ದಕ್ಕೂ ತ್ಯಾಜ್ಯ ರಾಶಿ.
- ಎಲ್ಲೆಡೆ ದುರ್ನಾತ, ಬೀದಿನಾಯಿಗಳ ಕಾಟ
- ಸಿಸಿ ಕ್ಯಾಮರಾ ಕಣ್ಣು ತಪ್ಪಿಸಿ ಕಸ ಎಸೆಯುವ ಆಗಂತುಕರು
- ಸಾಮಾನ್ಯ ಜ್ಞಾನವಿಲ್ಲದವರ ಕೃತ್ಯ
ಹಿಂದಿನ ಪಿಡಿಒ ಅವಧಿಯಲ್ಲಿ ‘ಸ್ವಚ್ಛ ಗ್ರಾಮ’ ಪ್ರಶಸ್ತಿ ಪುರಸ್ಕೃತ ಗುರುಪುರ ಗ್ರಾಮ ಪಂಚಾಯಿತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ ಒಳರಸ್ತೆಯ ಉದ್ದಕ್ಕೂ ಪುನಃ ಗುಡ್ಡೆಯಂತೆ ತ್ಯಾಜ್ಯ ರಾಶಿ ಬಿದ್ದಿದ್ದು, ತಡೆಯಲಾಗದ ದುರ್ವಾಸನೆ ಬೀರುತ್ತಿದೆ. ಬೇರೆಡೆಯಂತೆ ಇಲ್ಲೂ ತ್ಯಾಜ್ಯದಿಂದ ಬೀದಿನಾಯಿಗಳು ಮತ್ತು ಚಿರತೆಗಳ ದಾಳಿ ಆತಂಕ ಹೆಚ್ಚಾಗಿದೆ.
ಈ ರಸ್ತೆಯಲ್ಲಿ ಸಂಚರಿಸುವುದು ಈಗ ಅಪಾಯಕಾರಿಯಾಗಿ ಪರಿಣಮಿಸಿದೆ. ತ್ಯಾಜ್ಯ ರಾಶಿಯಲ್ಲಿರುವ ಹಸಿ ಮತ್ತು ಒಣ ಪದಾರ್ಥ ತಿನ್ನುವ ಭರಾಟೆಯಲ್ಲಿ ಬೀದಿ ನಾಯಿಗಳು ಕಿತ್ತಾಡುತ್ತಿವೆ. ಈ ಸನ್ನಿವೇಶ ವಾಹನ ಸವಾರರಿಗೆ ಭೀತಿ ಹುಟ್ಟಿಸುವಂತಿದೆ. ಕೆಲವೊಮ್ಮೆ ನಾಯಿಗಳು, ಮಂಗಗಳು ಮತ್ತು ಬಿಡಾಡಿ ಜಾನುವಾರುಗಳಿಂದ ಸಾರ್ವಜನಿಕರು ಅಪಾಯ ಎದುರಿಸಿದ್ದುಂಟು. ನಾಯಿಗಳು ಅಟ್ಟಾಡಿಸಿಕೊಂಡು ಬರುತ್ತವೆ.
ಚಿರತೆ ಭೀತಿ
ತ್ಯಾಜ್ಯ ರಾಶಿ ಇರುವಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುವುದು ಸಹಜ. ನಾಯಿಗಳನ್ನು ಬೇಟೆಯಾಡಲು ಚಿರತೆಗಳು ಬರುತ್ತವೆ. ಇಂತಹ ಪ್ರದೇಶಗಳಲ್ಲಿ ನಾಯಿಗಳ ಬೇಟೆಗೆ ದಾಳಿ ಇಡುವ ಚಿರತೆಗಳು, ನಾಯಿಗಳು ಸಿಗದಾಗ ಮನುಷ್ಯರ ಮೇಲೆ ಎರಗುತ್ತವೆ. ಇಂತಹ ಅನೇಕ ನಿದರ್ಶನಗಳು ಇವೆ. ಬೀದಿನಾಯಿಗಳು ಹೆಚ್ಚಾಗಿರುವ ಮಠದಗುಡ್ಡೆ ಸೈಟ್‌ನ ಮುಖ್ಯ ಒಳರಸ್ತೆ ಪ್ರದೇಶದಲ್ಲಿ ಹಿಂದೊಮ್ಮೆ ಚಿರತೆ ಕಾಣಿಸಿಕೊಂಡ ಬಗ್ಗೆ ಸಾರ್ವಜನಿಕರು ದೂರಿಕೊಂಡಿದ್ದರು. ಇದು ಗುರುಪುರ ಮತ್ತು ಕೈಕಂಬ ಭಾಗದಲ್ಲಿ ಹೆದ್ದಾರಿ (169) ಸಂಪರ್ಕಿಸುವ ಮುಖ್ಯ ಒಳರಸ್ತೆ ಇದಾಗಿದೆ. ಈ ಬಾರಿ ಈ ಭಾಗದಲ್ಲಿ ತ್ಯಾಜ್ಯದ ವಾಸನೆಗೆ ಚಿರತೆಗಳು ಬಂದರೆ ಅಚ್ಚರಿಪಡಬೇಕಾಗಿಲ್ಲ. ಈ ರಸ್ತೆ ಮೂಲಕ ಸಾಗುವ ವಾಹನ ಸವಾರರು ಕತ್ತಲಾದ ಬಳಿಕ ಅತೀವ ಎಚ್ಚರಿಕೆ ವಹಿಸುವ ಅಗತ್ಯವಿದೆ.
ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಪಂಚಾಯಿತಿ ಆಡಳಿತ ತ್ಯಾಜ್ಯ ವಿಲೇವಾರಿಗೆ ಸಾಕಷ್ಟು ಪ್ರಯತ್ನಿಸುತ್ತಿದೆ. ಮಠದಗುಡ್ಡೆ ಸೈಟ್ ರಸ್ತೆ ಬದಿಯಲ್ಲಿ ರಾತ್ರಿ ವೇಳೆ ತ್ಯಾಜ್ಯ ಎಸೆದು ಹೋಗುತ್ತಾರೆ. ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ತ್ಯಾಜ್ಯಕ್ಕೆ ಬೀದಿನಾಯಿ ಕಾಟ ಹೆಚ್ಚಾಗಿದ್ದು, ಚಿರತೆಗಳ ದಾಳಿ ಅಲ್ಲಗಳೆಯುವಂತಿಲ್ಲ. ಪಂಚಾಯಿತಿ ಸಭೆಯಲ್ಲಿ ಈ ವಿಷಯ ಚರ್ಚಿಸಿ ಕ್ರಮಕ್ಕೆ ಪ್ರಯತ್ನಿಸುವೆ. ಎಲ್ಲಕ್ಕೂ ಸಾರ್ವಜನಿಕರು ಸಹಕಾರ ಅಗತ್ಯವಿದೆ.