ಚಿಮೇನಿಯಲ್ಲಿ ಸಿದ್ಧಗೊಳ್ಳುತ್ತಿರುವ ಸೌರ ವಿದ್ಯುತ್ ವ್ಯವಸ್ಥೆ 
ದಕ್ಷಿಣ ಕನ್ನಡ

ವಿದ್ಯುತ್ ಬಿಕ್ಕಟ್ಟು ಶಮನಕ್ಕೆ ಬೃಹತ್ ಯೋಜನೆ

ಚೀಮೇನಿ ಸೌರ ಪಾರ್ಕ್‌ಗೆ 50 ಮೆಗಾವಾಟ್ ಬ್ಯಾಟರಿ ಶಕ್ತಿ ಸಂಗ್ರಹ ಸೇರ್ಪಡೆ

ವಿಜಯವಾಣಿ ಸುದ್ದಿಜಾಲ ಬದಿಯಡ್ಕ

ಕೇರಳದಲ್ಲಿ ಸಂಜೆ ವೇಳೆ ಎದುರಾಗುವ ತೀವ್ರ ವಿದ್ಯುತ್ ಅಭಾವಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಾಸರಗೋಡಿನ ಚೀಮೇನಿಯಲ್ಲಿ ಬೃಹತ್ ಯೋಜನೆಯೊಂದು ಸಿದ್ಧವಾಗುತ್ತಿದೆ. ಚೀಮೇನಿಯಲ್ಲಿ ನಿರ್ಮಿಸಲಾಗುತ್ತಿರುವ 100 ಮೆಗಾವಾಟ್ ಸೌರ ಪಾರ್ಕ್‌ನ ಎರಡನೇ ಹಂತದಲ್ಲಿ 50 ಮೆಗಾವಾಟ್ ಬ್ಯಾಟರಿ ಶಕ್ತಿ ಸಂಗ್ರಹಣಾ ವ್ಯವಸ್ಥೆ ಸೇರಿಸಲು ನಿರ್ಧರಿಸಲಾಗಿದೆ.

ಚೀಮೇನಿಯಲ್ಲಿ 100 ಮೆಗಾವಾಟ್ ಸೌರ ಪಾರ್ಕ್ ಸ್ಥಾಪನೆಗೆ ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ 2024 ಫೆಬ್ರವರಿಯಲ್ಲಿ ಅನುಮೋದನೆ ನೀಡಿತ್ತು. ನಂತರ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಟರಿ ಸಂಗ್ರಹಣೆ ಸೇರಿಸಲು ಪರಿಷ್ಕರಿಸಿದ ಯೋಜನಾ ವರದಿಗೆ 2026 ಏಪ್ರಿಲ್‌ನಲ್ಲಿ ಸಚಿವಾಲಯದ ಹಸಿರು ನಿಶಾನೆ ದೊರೆತಿದೆ.

ಯೋಜನೆಯ ಉದ್ದೇಶ: ಚೀಮೇನಿಯಲ್ಲಿ ಸ್ಥಾಪಿಸಲಾದ 50 ಮೆಗಾವ್ಯಾಟ್ ಬ್ಯಾಟರಿ ವ್ಯವಸ್ಥೆಯು 2 ಗಂಟೆಗಳ ಕಾಲ ಒಟ್ಟು 100 ಮೆಗಾವ್ಯಾಟ್ ವಿದ್ಯುತ್ ಸಂಗ್ರಹಿಸುವ ಸಾಮರ್ಥ್ಯ ಹೊಂದಿರುತ್ತದೆ. ಹಗಲಿನಲ್ಲಿ ಸೌರ ಫಲಕಗಳಿಂದ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ಬ್ಯಾಟರಿಗಳಲ್ಲಿ ಸಂಗ್ರಹಿಸಿ, ಸಂಜೆ ವೇಳೆ ಸೌರ ವಿದ್ಯುತ್ ಲಭ್ಯವಿಲ್ಲದಿದ್ದಾಗ ಗ್ರಿಡ್‌ಗೆ ಪೂರೈಸಲಾಗುತ್ತದೆ. ಈ ಮೂಲಕ ಸಂಜೆ ವೇಳೆ ಎದುರಾಗುವ ವಿದ್ಯುತ್ ಕೊರತೆ ನೀಗಿಸಲು ಯೋಜನೆ ರೂಪಿಸಲಾಗಿದೆ.

ನಿರ್ಮಾಣ ಪ್ರಗತಿ

ಚೀಮೇನಿ ಯೋಜನೆಯ ಅನುಷ್ಠಾನವನ್ನು ಭಾರತ ಸೌರಶಕ್ತಿ ನಿಗಮ ಮತ್ತು ಕೆಎಸ್‌ಇಬಿ ನಡುವಿನ ಜಂಟಿ ಉದ್ಯಮವಾದ ನವೀಕರಿಸಬಹುದಾದ ವಿದ್ಯುತ್ ನಿಗಮ ಲಿಮಿಟೆಡ್‌ಗೆ ವಹಿಸಲಾಗಿದೆ. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದ್ದು ರಸ್ತೆಗಳು, ಒಳಚರಂಡಿ ವ್ಯವಸ್ಥೆ, ನೀರು ಸರಬರಾಜು ಮುಂತಾದ ಮೂಲಸೌಕರ್ಯಗಳ ನಿರ್ಮಾಣ ಪ್ರಗತಿಯಲ್ಲಿದೆ.

2028ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ

ಅನುಮೋದಿಸಲಾದ ಪರಿಷ್ಕೃತ ಯೋಜನಾ ದಾಖಲೆಯ ಪ್ರಕಾರ, ಸೌರ ಯೋಜನೆಗೆ ಸಂಬಂಧಿಸಿದ ಮುಖ್ಯ ಚಟುವಟಿಕೆಗಳನ್ನು 2028ರ ಏಪ್ರಿಲ್‌ನೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಯೋಜನೆಯನ್ನು ನಿರ್ವಹಿಸಲು ವಿದ್ಯುತ್ ಕಾರ್ಯದರ್ಶಿ ನೇತೃತ್ವದ ಕೆಎಸ್‌ಇಬಿ ಮೇಲ್ವಿಚಾರಣಾ ಸಮಿತಿಯೂ ಕಾರ್ಯನಿರ್ವಹಿಸುತ್ತಿದೆ. ಚೀಮೇನಿಯನ್ನು ಹೊರತುಪಡಿಸಿ ಕಾಸರಗೋಡು ಜಿಲ್ಲೆಯ ಮೈಲಟ್ಟಿ ಮತ್ತು ಮುಲ್ಲೇರಿಯಾ, ಮಲಪ್ಪುರಂನ ಅರೀಕೋಡ್, ಕಣ್ಣೂರಿನ ಶ್ರೀಕಾಂತಪುರಂ ಮತ್ತು ತಿರುವನಂತಪುರದ ಪೋತನ್‌ಕೋಡ್‌ನಲ್ಲಿ ಕೆಎಸ್‌ಇಬಿ ನೇತೃತ್ವದಲ್ಲಿ ಇತರ ಬಿಇಎಸ್‌ಎಸ್ ಯೋಜನೆಗಳನ್ನು ಯೋಜಿಸಲಾಗಿದೆ.