ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆದ ಸಾಮೂಹಿಕ ಲಕ್ಷ್ಮೀ ಪೂಜೆಯಲ್ಲಿ ಬಾಲಭೋಜನ ಸಮಾಪ್ತಿ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಧ್ವೀ ಸತ್ಯಾಮೃತ ನಂದಿನಿ, ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ, ಹರಿನಾರಾಯಣ ಮಯ್ಯ ಇತರರು ಇದ್ದರು.
- ಮಾಣಿಲ ಶ್ರೀ ಆಶೀರ್ವಚನ
- ಬಾಲಭೋಜನ ಸಮಾಪ್ತಿ ಕಾರ್ಯಕ್ರಮ
ಪುತ್ತೂರು: ಸಮಾಜದಲ್ಲಿ ಹಾದಿ ತಪ್ಪುವ ಮಕ್ಕಳಲ್ಲಿ ಪರಿವರ್ತನೆಯನ್ನು ಮಾಡುವ ಅಗತ್ಯವಿದೆ. ಬಾಲ ಭೋಜನದ ಮೂಲಕ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯ. ಗುರುಹಿರಿಯರನ್ನು ಗೌರವಿಸುವ, ಸಮಾಜದ ಮಧ್ಯೆ ಅನ್ಯೋನ್ಯವಾಗಿ ಬಾಳುವ ಯುವಜನಾಂಗ ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ ೪೮ ದಿನಗಳ ಕಾಲ ನಡೆದ ಸಾಮೂಹಿಕ ಲಕ್ಷ್ಮೀಪೂಜೆಯಲ್ಲಿ ಬಾಲಭೋಜನ ಸಮಾಪ್ತಿಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮುಂಬೈ ಸಾಧ್ವೀ ಸತ್ಯಾಮೃತ ನಂದಿನಿ ಸಾನ್ನಿಧ್ಯ ವಹಿಸಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ, ಹೇರೂರು ಬಜೈ ಶ್ರೀ ಮಹಾವಿಷ್ಣು ದೇವಸ್ಥಾನದ ಹರಿನಾರಾಯಣ ಮಯ್ಯ, ನಿವೃತ್ತ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಮಂಗಳೂರು ಮಾಜಿ ಮೇಯರ್ ಸುಽರ್ ಶೆಟ್ಟಿ ಕಣ್ಣೂರು, ಮಾಜಿ ಸದಸ್ಯ ವಿಜಯ ಕುಮಾರ್ ಶೆಟ್ಟಿ, ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದುಂಬಾಡಿಗುತ್ತು, ಪದ್ಮಶ್ರೀ ಅಸೋಸಿಯೇಟ್ಸ್ ತೆರಿಗೆ ಸಲಹೆಗಾರ ಕೃಷ್ಣ ಎಂ.ಅಳಿಕೆ, ವ್ರತಾಚರಣೆ ಸಮಿತಿ ಅಧ್ಯಕ್ಷ ಹರೀಶ್ ಬೊಟ್ಟಾರಿ, ಪ್ರಧಾನ ಕಾರ್ಯದರ್ಶಿ ರೇವತಿ ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ದುರ್ಗಾಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮೋನಪ್ಪ ಭಂಡಾರಿ ಸ್ವಾಗತಿಸಿದರು. ಟ್ರಸ್ಟಿ ಚಂದ್ರಶೇಖರ ಮೂಲ್ಯ ವಂದಿಸಿದರು. ನವೀನ್ ಕುಲಾಲ್ ನಿರೂಪಿಸಿದರು.
ಧರ್ಮ ಹಾಗೂ ದೇಶವನ್ನು ಆಳುವುದಕ್ಕೆ ಸರಿಯಾದ ವ್ಯಕ್ತಿಗಳ ಅಗತ್ಯವಿದೆ. ಯಾರೂ ಧರ್ಮವನ್ನು ಮೀರಿ ಹೋಗಬಾರದು. ಸಾಧು- ಸಂತರಿಂದ ಧರ್ಮ ಅರಾಜಕತೆಗೆ ಹೋಗುವುದಿಲ್ಲ. ಧರ್ಮ ಪ್ರತಿಯೊಬ್ಬರನ್ನೂ ರಕ್ಷಿಸುತ್ತದೆ. ಜನರ ಬಳಿಗೆ ಹೋದಾಗ ಕಷ್ಟವನ್ನು ಅರಿಯಲು ಸಾಧ್ಯ.
— ಕಮಲಾದೇವಿಪ್ರಸಾದ ಆಸ್ರಣ್ಣ, ಕಟೀಲ ಕ್ಷೇತ್ರದ ಆನುವಂಶಿಕ ಅರ್ಚಕ