ದಕ್ಷಿಣ ಕನ್ನಡ

ಮಂಗಳೂರು ವಿಮಾನ ಅಪಘಾತದಲ್ಲಿ ಬದುಕುಳಿದವ ದರೋಡೆ ಪ್ರಕರಣದ ಆರೋಪಿ

ಕಕ್ಯಪದವು ದರೋಡೆ ಪ್ರಕರಣದ ಆರೋಪಿಗಳ ಹೆಡೆಮುರಿಕಟ್ಟಿದ ಪೊಲೀಸರು

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಕಕ್ಯಪದವು ರಸ್ತೆಯಲ್ಲಿ ಹಾರ್ಡ್‌ವೇರ್ ಅಂಗಡಿಗಳಿಂದ ಹಣ ಸಂಗ್ರಹಿಸಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ 8 ಲಕ್ಷ ರೂ. ದರೋಡೆಗೈದ ಪ್ರಕರಣವನ್ನು ಬಂಟ್ವಾಳ ಪೊಲೀಸರು ಮೂರು ತಿಂಗಳ ಬಳಿಕ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಟ್ವಾಳ ಎ.ಎಸ್.ಪಿ. ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ, ದರೋಡೆಗೆ ಸಂಚು ರೂಪಿಸಿದ್ದ ಪ್ರಮುಖ ಸೂತ್ರಧಾರ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದೆ. ಉಳ್ಳಾಲ ನಿವಾಸಿ ಉಮ್ಮರ್ ಫಾರೂಕ್, ಕೊಣಾಜೆ ಕಲ್ಲಗುಂಡಿ ನಿವಾಸಿ ಶಾಕೀರ್ ಹಾಗೂ ಶಕ್ತಿನಗರದ ಪ್ರವೀತ್ ಶೆಟ್ಟಿ ಬಂಧಿತ ಆರೋಪಿಗಳು.

ಆಗಸ್ಟ್ 20ರಂದು ಕಕ್ಯಪದವು ರಸ್ತೆಯಲ್ಲಿ ಈ ದರೋಡೆ ನಡೆದಿತ್ತು. ಹಾರ್ಡ್‌ವೇರ್ ಅಂಗಡಿಗಳಿಂದ ಹಣ ಸಂಗ್ರಹಿಸಿ ತೆರಳುತ್ತಿದ್ದ ವ್ಯಕ್ತಿಯನ್ನು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ, ಅವರ ಬಳಿಯಿದ್ದ ಸುಮಾರು 8 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ಘಟನೆ ನಡೆದಿದ್ದು, ಜನಸಂಚಾರ ಕಡಿಮೆ ಇತ್ತು. ಅಲ್ಲದೆ, ಘಟನಾ ಸ್ಥಳದ ಸುತ್ತಮುತ್ತ ಸಿಸಿಟಿವಿಯಂತಹ ಯಾವುದೇ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಗಳೂ ಇರಲಿಲ್ಲ. ಹೀಗಾಗಿ ಆರೋಪಿಗಳ ಪತ್ತೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.

ಆದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದರು. ಬಂಟ್ವಾಳ ಎ.ಎಸ್.ಪಿ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು. ಇದೀಗ ಪ್ರಕರಣದ ಪ್ರಮುಖ ಸೂತ್ರಧಾರ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಿಂದಿನ ಕೆಲಸದ ಅನುಭವ

ಪ್ರಕರಣದ ಪ್ರಮುಖ ಸೂತ್ರಧಾರ ಎನ್ನಲಾದ ಉಮ್ಮರ್ ಫಾರೂಕ್ ಈ ಹಿಂದೆ ಅಡ್ಯಾರಿನ ಹಾರ್ಡ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಆ ಕೆಲಸ ಬಿಟ್ಟು ಮುಡಿಪುವಿನ ಹಾರ್ಡ್‌ವೇರ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಹಾರ್ಡ್‌ವೇರ್ ಅಂಗಡಿಗಳ ಹಣ ಸಂಗ್ರಹ ಹಾಗೂ ಸಾಗಾಟದ ಬಗ್ಗೆ ಹೊಂದಿದ್ದ ಮಾಹಿತಿಯನ್ನೇ ಬಳಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ಇನ್ನೂ ಹಲವು ಪ್ರಕರಣಗಳಲ್ಲಿ ಆರೋಪಿಗಳು ಸಂಬಂಧ ಹೊಂದಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳಿಂದ ಇತರ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸ್ ತಂಡ ಕಾರ್ಯಾಚರಣೆ ಚುರುಕುಗೊಳಿಸಿದೆ. ಇದರಲ್ಲಿ ಶಾಕೀರ್ ವಿರುದ್ಧ ಮುಂಬಯಿನಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

ವಿಮಾನ ದುರಂತದಲ್ಲಿ ಬದುಕುಳಿದಿದ್ದ ಆರೋಪಿ

ಬಂಧಿತ ಪ್ರಮುಖ ಆರೋಪಿ ಉಮ್ಮರ್ ಫಾರೂಕ್ 2010ರಲ್ಲಿ ಮಂಗಳೂರಿನಲ್ಲಿ ಸಂಭವಿಸಿದ್ದ ವಿಮಾನ ದುರಂತದಲ್ಲಿ ಬದುಕುಳಿದ ಎಂಟು ಮಂದಿಯ ಪೈಕಿ ಒಬ್ಬ ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ದರೋಡೆ ಪ್ರಕರಣ ದಾಖಲಾಗಿದ್ದು, ಸುದೀರ್ಘ ತನಿಖೆಯ ಬಳಿಕ ಆರೋಪಿಗಳ ಬಂಧನದಿಂದ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ.