ನೆಹರು ಮೈದಾನದಲ್ಲಿರುವ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ ಪ್ರತಿಮೆ
- ನೆಹರು ಅವರ ಪ್ರತಿಮೆಯ ಮೆರುಗು ಇನ್ನಷ್ಟು ಹೆಚ್ಚಲಿದೆ.
- ನೆಹರು ಪ್ರತಿಮೆಗೆ ಕಿರೀಟದಂತೆ ಭಾರತದ ಭೂಪಟ ನಿರ್ಮಾಣ
- 10.05 ಅಡಿ ಎತ್ತರ ಹಾಗೂ 9.05 ಅಡಿ ಅಗಲದ ಭೂಪಟ
ಮಂಗಳೂರು: ಇಲ್ಲಿನ ನೆಹರು ಮೈದಾನದಲ್ಲಿರುವ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ ಪ್ರತಿಮೆಯ ಮೆರುಗು ಇನ್ನಷ್ಟು ಹೆಚ್ಚಲಿದೆ.
ನೆಹರು ಅವರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ನೆಹರು ಪ್ರತಿಮೆಗೆ ಕಿರೀಟದಂತೆ ಭಾರತದ ಭೂಪಟ ನಿರ್ಮಾಣ ಮಾಡಿದೆ. ನ.14 ನೆಹರೂ ಅವರ ಜನ್ಮದಿನವಾದ ಮಕ್ಕಳ ದಿನಾಚರಣೆಯಂದು ಈ ಭೂಪಟ ಲೋಕಾರ್ಪಣೆಗೊಳ್ಳಲಿದೆ. 10.05 ಅಡಿ ಎತ್ತರ ಹಾಗೂ 9.05 ಅಡಿ ಅಗಲದ ಭೂಪಟವನ್ನು ಆಕರ್ಷಣೀಯವಾಗಿ ವಿನ್ಯಾಸಗೊಳಿಸಲಾಗಿದೆ.
ನೆಹರೂ ಅವರು ಪ್ರಧಾನಿಯಾಗಿದ್ದಾಗ ಅವರು ದೇಶಕ್ಕೆ ನೀಡಿದ್ದ ಕೊಡುಗೆಗಳನ್ನು ಈ ಭೂಪಟದಲ್ಲಿ ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಭಾರತವನ್ನು ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಪ್ರಗತಿಪರ ರಾಷ್ಟ್ರವಾಗಿ ರೂಪಿಸುವಲ್ಲಿ ಅವರು ವಹಿಸಿದ್ದ ಪ್ರಮುಖ ಪಾತ್ರ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಅವರು ನೀಡಿದ್ದ ಕೊಡುಗೆಗಳನ್ನು ಪ್ರತಿಬಿಂಬಿಸಲಾಗಿದೆ. ಅದೇ ರೀತಿ ಆಯಾ ರಾಜ್ಯಗಳ ಕಲೆ, ಸಂಸ್ಕೃತಿಯನ್ನು ಕೂಡಾ ಚಿತ್ರಿಸಲಾಗಿದೆ. ಕರ್ನಾಟಕ ಮೈಸೂರು ಅರಮನೆ ಹಾಗೂ ಇತರ ರಾಜ್ಯಗಳ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ಕಾಣಬಹುದಾಗಿದೆ.
ಜವಾಹರ್‌ಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ಮಂಗಳೂರಿಗೆ ಭೇಟಿ ನೀಡಿ ಈ ಮೈದಾನದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅದರ ಸ್ಮರಣಾರ್ಥ ಮೈದಾನಕ್ಕೆ ನೆಹರು ಮೈದಾನ ಎಂದು ಕರೆಯಲಾಗುತ್ತಿದೆ. ಅವರ 125ನೇ ವರ್ಷಾಚರಣೆ ಸಂದರ್ಭ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಪ್ರತೀ ವರ್ಷ ನ.14ರಂದು ಅವರ ಜನ್ಮದಿನದಂದು ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಯವರು ಪ್ರತಿಮೆಗೆ ಮಾಲಾರ್ಪಣೆಗೈದು ಗೌರವ ಸಲ್ಲಿಸುತ್ತಿದ್ದಾರೆ.
ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅವರ ಪ್ರತಿಮೆಗೆ ಕಿರೀಟದಂತೆ ಭಾರತದ ಭೂಪಟ ರಚಿಸಲಾಗಿದೆ. ಅದರಲ್ಲಿ ಆಯಾಯ ರಾಜ್ಯಗಳ ಕಲೆ, ಸಂಸ್ಕೃತಿ ಜತೆಗೆ ನೆಹರು ಅವರ ಸಾಧನೆಗಳನ್ನು ಚಿತ್ರಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸಬೇಕು.ಸದಾಶಿವ ಉಳ್ಳಾಲ್ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
ನೆಹರೂ ಪ್ರತಿಮೆ ಹಿಂಬದಿಗೆ ಮಾರ್ಬಲ್ ಪೌಡರ್ ಹಾಗೂ ಮೆಟಲ್ ಬಳಸಿ ಭಾರತದ ಭೂಪಟ ರಚಿಸಲಾಗಿದೆ. ಸುಮಾರು ಒಂದು ತಿಂಗಳ ಕಾಲಾವಧಿಯಲ್ಲಿ ರಚಿಸಲಾಗಿದೆ. ದೇಶದ ಎಲ್ಲಾ ರಾಜ್ಯಗಳ ಕಲಾ ಚಿತ್ರಣವನ್ನು ಪ್ರತಿಬಿಂಬಿಸಲು ಪ್ರಯತ್ನಿಸಿದ್ದೇವೆ. ದಿನೇಶ್ ಮಡ್ಯಾರ್ವಿನ್ಯಾಸಕಾರರು