ಮಂಗಳೂರು ನಗರ ಯುವಜನ ಸಮ್ಮೇಳನ ಉದ್ಘಾಟಿಸಿ ಎಚ್. ಆರ್ ನವೀನ್ ಕುಮಾರ್ ಮಾತನಾಡಿದರು. ಬಿ.ಕೆ ಇಮ್ತಿಯಾಜ್, ಸಂತೋಷ ಬಜಾಲ್, ನವೀನ್ ಕೊಂಚಾಡಿ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಮಂಗಳೂರು ನಗರ ಯುವಜನ ಸಮ್ಮೇಳನ

ಮಂಗಳೂರು:

ಯುವಜನರ ಉದ್ಯೋಗ ಮತ್ತು ಶಿಕ್ಷಣದ ಬೇಡಿಕೆಗಳನ್ನು ಕಡೆಗಣಿಸುವ ಯಾವ ಸರ್ಕಾರವು ಉಳಿಯಲು ಸಾಧ್ಯವಿಲ್ಲ. ಮೋದಿ ಸರ್ಕಾರ ಕಟ್ಟಿರುವ ಸುಳ್ಳು ಮತ್ತು ಭ್ರಮೆಗಳ ಗೋಪುರ ಕುಸಿಯುತ್ತಿದೆ. ಪೊಲೀಸ್ ಕ್ರಮಗಳಿಂದ ವಿದ್ಯಾರ್ಥಿ ಯುವಜನರ ಧ್ವನಿ ಮತ್ತು ಅವರ ಕನಸುಗಳನ್ನು ಭಗ್ನಗೊಳಿಸಲು ಸಾಧ್ಯವಾಗದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಎಚ್. ಆರ್ ನವೀನ್ ಕುಮಾರ್ ಹೇಳಿದರು.

ನಗರದ ಸಹೋದಯ ಸಭಾಂಗಣದಲ್ಲಿ ಭಾನುವಾರ ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ ನಡೆದ 14ನೇ ಮಂಗಳೂರು ನಗರ ಯುವಜನ ಸಮ್ಮೇಳನ ಉದ್ಘಾಟಿಸಿ ಮಾತಾನಾಡಿದರು.
ನಿರುದ್ಯೋಗ ಸಮಸ್ಯೆ ವಿರಾಟ್ ಸ್ವರೂಪ ಪಡೆದುಕೊಂಡಿದೆ. ಇದರಿಂದಾಗಿ ಹಸಿವು, ಬಡತನದ ಪ್ರಮಾಣ ತಾರಕಕ್ಕೆ ಏರಿದೆ. ಯುವಜನರ ಭಾವನೆಗಳು ನಿರ್ಲಕ್ಷಿಸಲ್ಪಡುತ್ತಿದೆ ಮತ್ತು ಯುವಜನರನ್ನು ಜಾತಿ, ಧರ್ಮದ ಗಲಾಟೆಗೆ ದುರ್ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದ ಅವರು ದೇಶದಲ್ಲಿ ಯುವಜನರ ಹಕ್ಕುಗಳ ಪ್ರಾಪ್ತಿಗಾಗಿ ಯುವಜನ ಚಳುವಳಿ ತೀವ್ರಗೊಳ್ಳಬೇಕೆಂದು ಆಗ್ರಹಿಸಿದರು.
ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಬಿ.ಕೆ ಇಮ್ತಿಯಾಜ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲೆಯಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಅಪರಾಧಗಳನ್ನು ಧರ್ಮದ ಆಧಾರದಲ್ಲಿ ನೋಡಿ ಪ್ರತಿಕ್ರಿಯಿಸುವ ಮನೋಭಾವನೆ ಸೋಲಿಸಬೇಕಿದೆ ಎಂದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ ಬಜಾಲ್ ಪ್ರತಿನಿಧಿ ಅಧಿವೇಶನ ಉದ್ಘಾಟಿಸಿದರು. ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಸಮಾರೋಪ ಭಾಷಣಗೈದರು.
ನಗರ ಅಧ್ಯಕ್ಷ ನವೀನ್ ಕೊಂಚಾಡಿ ಅಧ್ಯಕ್ಷತೆ ವಹಿಸಿದ್ದರು. ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಮುಖಂಡರಾದ ಆಜ್ಲಾನ್, ವಿನಾಯಕ, ಉಪಸ್ಥಿತರಿದ್ದರು.
ನಗರ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ ಸ್ವಾಗತಿಸಿ, ಜಿಲ್ಲಾ ಸಹ ಕಾರ್ಯದರ್ಶಿ ಮಾಧುರಿ ಬೋಳಾರ ಕಾರ್ಯಕ್ರಮ ನಿರೂಪಿಸಿದರು.