ಮಂಗಳೂರು: ಕೊಟ್ಟಾರ ಚೌಕಿ ಬಳಿ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವರು ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದ ಪ್ರಕರಣದಲ್ಲಿ ಅಪಘಾತದ ಬಳಿಕ ಪರಾರಿಯಾಗಿದ್ದ ಲಾರಿ ಚಾಲಕನಿಗೆ ಮಂಗಳೂರಿನ 8ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪೆರ್ಲ ಮಣಿಯಂಪಾರೆ ನಿವಾಸಿ ಅನ್ಸಾರ್ ಜಿ. ಶಿಕ್ಷೆಗೊಳಗಾದ ಚಾಲಕ.
ಪ್ರಕರಣದ ವಿವರ: 2024ರ ಜ.24ರಂದು ನಗರದ ಕೆ.ಪಿ.ಟಿ ಕಡೆಯಿಂದ ಸುರತ್ಕಲ್ ಕಡೆಗೆ ಲಾರಿಯನ್ನು ಚಾಲಕ ಅನ್ಸಾರ್ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಟ್ಟಾರ ಚೌಕಿಯಲ್ಲಿ ಫೋರ್ಷ್ ಶೋ ರೂಮ್ ನ ಎದುರು ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು, ಡಿವೈಡರ್ ಮೇಲಿದ್ದ ವಿದ್ಯುತ್ ಕಂಬಕ್ಕೆ ತಾಗಿ ಇನ್ನೊಂದು ರಸ್ತೆಗೆ ಹೋಗಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಆಯಿಷಾ ರಸೈಫಾ, ಅಬ್ದುಲ್ ರಜಾಕ್, ರಷೀದಾ ರಫಿಯಾ ಹಾಗೂ ಆಷಿಯಾ ಎಂಬವರು ಗಾಯಗೊಂಡಿದ್ದರು. ಅಬ್ದುಲ್ ರಜಾಕ್ ಹಾಗೂ ಆಯಿಷಾ ಅವರಿಗೆ ತೀವ್ರ ತರದ ಗಾಯಗಳಾಗಿದ್ದರೆ, ಆಷಿಯಾ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿದ್ದರು. ಅಪಘಾತದ ಬಳಿಕ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿದ್ದ.
ಕಾರು ಚಾಲಕಿ ಸುಹಾನಾ ನೀಡಿದ ದೂರಿನಂತೆ ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕ ಹುಲಗಪ್ಪಾ ಡಿ. ಅವರು, ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಕೈಗೆತ್ತಿಕೊಂಡ 8ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಮೋನಿಷಾ ಆರ್. ಅವರು ವಾದ ಪ್ರತಿವಾದ ಆಲಿಸಿ ಚಾಲಕ, ಗಾಯಾಳುಗಳಿಗೆ ಯಾವುದೇ ವೈದ್ಯಕೀಯ ನೆರವು ನೀಡದೆ ಸ್ಥಳದಿಂದ ಪರಾರಿಯಾದದ್ದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದ ಹಿನ್ನಲೆಯಲ್ಲಿ ಚಾಲಕನಿಗೆ ಐ.ಎಂ.ವಿ ಕಾಯ್ದೆ ಕಲಂ 187ರ ಅಡಿಯಲ್ಲಿ 2 ತಿಂಗಳ ಸಾದಾ ಸಜೆ ಮತ್ತು 5,000 ರೂ. ದಂಡ. ಹಾಗೂ ದಂಡ ತೆರಲು ತಪ್ಪಿದಲ್ಲಿ 8 ದಿನಗಳ ಸಾದಾ ಸಜೆ ವಿಧಿಸಿ ಸಮಾಜಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಆರೋನ್ ಡಿಸೋಜ ವಿಟ್ಲ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.