ರಾಷ್ಟ್ರಮಟ್ಟದಲ್ಲಿ 7ನೇ ಸ್ಥಾನದ ಹಿರಿಮೆ ಹಾಗೂ ರಾಜ್ಯದಲ್ಲೇ ನಂ.1 ಕೇಂದ್ರವಾಗಿ ಗುರುತಿಸಿಕೊಂಡಿರುವ ಮಂಗಳೂರಿನ ‘ಸಖಿ-ಒನ್‌ಸ್ಟಾಪ್ ಸೆಂಟರ್’.
ಮಂಗಳೂರು: ಮಂಗಳೂರಿನ ಸಖಿ-ಒನ್ ಸ್ಟಾಪ್ ರಾಜ್ಯದಲ್ಲೇ ನಂ.1 ಹಾಗೂ ದೇಶದ 7ನೇ ಅತ್ಯುತ್ತಮ ಕೇಂದ್ರ ಎಂಬ ಹೆಗ್ಗಳಿಕೆಗೆ ಪತ್ರಾವಾಗಿದೆ. ದ.ಕ ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ನಿರ್ವಹಿಸುವ ‘ಸಖಿ-ಒನ್‌ಸ್ಟಾಪ್ ಸೆಂಟರ್’ ದೇಶದ 966 ಸಖಿ ಕೇಂದ್ರಗಳ ಪೈಕಿ ರಾಷ್ಟ್ರಮಟ್ಟದಲ್ಲಿ 7ನೇ ಸ್ಥಾನದ ಹಿರಿಮೆ ಹಾಗೂ ರಾಜ್ಯದಲ್ಲೇ ನಂ.1 ಕೇಂದ್ರವಾಗಿ ಗುರುತಿಸಿಕೊಂಡಿರುವುದು ಮಂಗಳೂರಿನ ಹಿರಿಮೆ.
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ, ಕಾನೂನು ಸೇರಿದಂತೆ ವಿವಿಧ ನೆರವು ಒದಗಿಸುವ ನಿಟ್ಟಿನಲ್ಲಿ 2019ರ ಜ.26ರಿಂದ ಸರ್ಕಾರಿ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯ ಕಟ್ಟಡದಲ್ಲಿ ಆರಂಭಗೊಂಡಿದ್ದ ಸಖಿ ಕೇಂದ್ರ ಪ್ರಸ್ತುತ ಎಂಸಿಎಚ್ ಕಟ್ಟಡದ ಎರಡನೇ ಅಂತಸ್ತಿನ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಕೌನ್ಸೆಲಿಂಗ್, ಕನ್ಸಲ್ಟೆನ್ಸಿ, ಕಚೇರಿ, ಆಡಳಿತಾಧಿಕಾರಿ ಕೊಠಡಿ, ವಾರ್ಡ್, ಲಿವಿಂಗ್, ಕಿಚನ್ ಸೇರಿದಂತೆ ಸಂತ್ರಸ್ತರಿಗೆ ಅಗತ್ಯವಾದ ಪೂರಕ ಮೇಲ್ವಿಚಾರಣಾ ಕೊಠಡಿಗಳೂ ಲಭ್ಯ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ದಿನದ 24 ಗಂಟೆಗಳ ಕಾಲ ವೈದ್ಯಕೀಯ ನೆರವನ್ನೂ ಇಲ್ಲಿ ಒದಗಿಸಲಾಗುತ್ತದೆ. ಪೊಲೀಸರು, ಆಪ್ತ ಸಮಾಲೋಚಕರ ಸೇವೆಯೂ ಇಲ್ಲಿ ಲಭ್ಯವಿದೆ.
ಮಹಿಳೆಯರಿಗೆ ಸಖಿಯಿಂದ ಸಾಂತ್ವನದ ನೆರವು
ಮಂಗಳೂರು ಮಹಿಳೆಯರ (ಅಪ್ರಾಪ್ತರು ಸೇರಿದಂತೆ) ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ಕೌಟುಂಬಿಕ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಬೀಳುತ್ತಿಲ್ಲ. ಸುಶಿಕ್ಷಿತರ ಜಿಲ್ಲೆಯೆಂದೇ ಪರಿಗಣಿಸಲ್ಪಡುವ ದ.ಕ. ಜಿಲ್ಲೆಯ ‘ಸಖಿ-ಒನ್‌ಸ್ಟಾಪ್ ಸೆಂಟರ್’ಗೆ ಬರುತ್ತಿರುವ ಪ್ರಕರಣಗಳಲ್ಲಿ ಇವುಗಳೇ ಅಧಿಕ. ಹಿಂದೆಲ್ಲಾ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಭಯ, ಆತಂಕ ಅಥವಾ ಅಂಜಿಕೆಯ ಕಾರಣದಿಂದ ಪೊಲೀಸ್ ಮೆಟ್ಟಿಲೇರದೆ ಸಂತ್ರಸ್ತರಿಗೆ ನ್ಯಾಯ ಅಥವಾ ಪರಿಹಾರ ಎಂಬುದು ಮರೀಚಿಕೆಯಾಗಿತ್ತು. ಆದರೆ ಕಳೆದ ಹಲವು ವರ್ಷಗಳಿಂದೀಚೆಗೆ ಸಖಿ ಸಾಂತ್ವನ ಕೇಂದ್ರದಿಂದ ಮಹಿಳೆಯರಿಗೆ ಸೂಕ್ತ ಸಮಯದಲ್ಲಿ ಅಗತ್ಯ ನೆರವು, ಸಾಮಾಜಿಕವಾಗಿ ಕಳವಳ ಮೂಡಿಸುವಕಾರ್ಯದಲ್ಲಿ ರಾಜ್ಯದಲ್ಲೇ ದ.ಕ ಸಖಿ ಕೇಂದ್ರ ಮುಂಚೂಣಿಯಲ್ಲಿದೆ.
ಮಹಿಳಾ ಆಯೋಗದಿಂದ ಮೆಚ್ಚುಗೆ
ದ.ಕ. ಜಿಲ್ಲಾ ಮಟ್ಟದ ಸಖಿ ಕೇಂದ್ರ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಅವರು ಸಖಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ರಾಷ್ಟ್ರಮಟ್ಟದಲ್ಲಿ 7ನೇ ಸ್ಥಾನ- ರಾಜ್ಯದ ನಂ.1 ಸಖಿ ಕೇಂದ್ರ
ದೈಹಿಕ, ಮಾನಸಿಕ ಅಥವಾ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ, ಕಾನೂನು ಮತ್ತು ಪೊಲೀಸ್ ನೆರವನ್ನು ಒದಗಿಸುವುದು, ಹಲವು ಪ್ರಮುಖ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಯರಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ, ಎಫ್.ಐ.ಆರ್ ದಾಖಲಿಸಲು ಸಹಾಯ ಮತ್ತು ತಾತ್ಕಾಲಿಕ ಆಶ್ರಯ ನೀಡಿರುವುದು. ದೌರ್ಜನ್ಯದಿಂದಾದ ಮಾನಸಿಕ ಆಘಾತದಿಂದ ಹೊರಬರಲು ಮಹಿಳೆಯರಿಗೆ ನುರಿತ ಆಪ್ತಸಮಾಲೋಚಕರಿಂದ ಕೌನ್ಸೆಲಿಂಗ್ ಒದಗಿಸಿರುವುದು, ಸಂತ್ರಸ್ತೆಯರ ಮಾಹಿತಿಯನ್ನು ಗೌಪ್ಯವಾಗಿಟ್ಟು, ಅವರಿಗೆ ಸುರಕ್ಷಿತ ವಾತಾವರಣ ನಿರ್ಮಿಸಿರುವುದನ್ನೇ ಪ್ರಮುಖ ಮಾಡದಂಡವಾಗಿರಿಸಿ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯವು ದ.ಕ. ಜಿಲ್ಲೆಯ ‘ಸಖಿ-ಒನ್‌ಸ್ಟಾಪ್ ಸೆಂಟರ್’ನ್ನು ರಾಷ್ಟ್ರಮಟ್ಟದಲ್ಲಿ 7ನೇ ಸ್ಥಾನ- ರಾಜ್ಯದ ನಂ.1 ಸಖಿ ಕೇಂದ್ರವಾಗಿ ಘೋಷಿಸಿದೆ.
ದ.ಕ ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ನಿರ್ವಹಿಸುವ ಕೇಂದ್ರ-ಮಹಿಳೆಯರಿಗೆ ಸಖಿಯಿಂದ ಸಾಂತ್ವನದ ನೆರವು ಸಖಿಯಿಂದ ಆಪ್ತ ಸಮಾಲೋಚನೆ
2025-26ನೆ ಸಾಲಿನಲ್ಲಿ (2026ರ ಫೆಬ್ರವರಿವರೆಗೆ) ಕೌಟುಂಬಿಕ ಹಿಂಸೆ, ಅತ್ಯಾಚಾರ, ಲೈಗಿಂಕ ದೌರ್ಜನ್ಯ, ನಾಪತ್ತೆ, ವರದಕ್ಷಿಣೆ ಕಿರುಕುಳ ಹಾಗೂ ಇತರ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಒಟ್ಟು 389 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 80 ಅತ್ಯಾಚಾರ ಪ್ರಕರಣಗಳಾಗಿದ್ದರೆ, 98 ಕೌಟುಂಬಿಕ ಹಿಂಸೆಯ ಪ್ರಕರಣಗಳು ಸೇರಿವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ 6, ಬಾಲ್ಯ ವಿವಾಹ 4, ನಾಪತ್ತೆ ಪ್ರಕರಣ 42, ಸೈಬರ್ ಕ್ರ್ರೈೆಂ 1, ಇತರೆ 129 ಪ್ರಕರಣಗಳು ಸಖಿ ಕೇಂದ್ರದಲ್ಲಿ ದಾಖಲಾಗಿದೆ. ಮಕ್ಕಳ ದ.ಕ ಜಿಲ್ಲೆಯಲ್ಲಿ ದಾಖಲಾಗುವ ಅತ್ಯಾಚಾರ ಪ್ರಕರಣಗಳಲ್ಲಿ ಪೋಕ್ಸೋ ಪ್ರಕರಣಗಳೇ ಅಧಿಕ. ಇದರಲ್ಲಿ ಪ್ರೀತಿ- ಪ್ರೇಮದ ನೆಪದಲ್ಲಿ ಲೈಂಗಿಕ ವಂಚನೆಗೊಳಗಾದ ಮಹಿಳೆಯರ ಪ್ರಕರಣಗಳು ಶೇ. 20ರಷ್ಟಿ ಇದೆ. ಈ ಎಲ್ಲಾ ಪ್ರಕರಣಗಳ ಸಂತ್ರಸ್ಥರಿಗೆ ಸಖಿಯಿಂದ ಆಪ್ತ ಸಮಾಲೋಚನೆಗೆ ಹೆಚ್ಚಿನ ಬೇಡಿಕೆಯಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ.
"
2025-26ನೇ ಸಾಲಿನಲ್ಲಿ ‘ಸಖಿ-ಒನ್‌ಸ್ಟಾಪ್ ಸೆಂಟರ್’ನಿಂದ ಸಂತ್ರಸ್ಥರಿಗೆ 54 ಪೊಲೀಸ್ ಸೇವೆ, 122 ಕಾನೂನು ನೆರವು, 210 ವೈದ್ಯಕೀಯ ನೆರವು, 224 ಯಶಸ್ವಿ ಆಪ್ತಸಮಾಲೋಚನೆ, 47 ವಸತಿ ಸೇವೆಗಳನ್ನು ನೀಡಲಾಗಿದೆ. ಕೌಟುಂಬಿಕ ಬಿನ್ನಾಭಿಪ್ರಾಯಗಳ ಬಗ್ಗೆ ಕೌನ್ಸಿಲಿಂಗ್‌ಗೆ ಅತೀ ಹೆಚ್ಚಿನ ಬೇಡಿಕೆ ಬರುತ್ತಿದ್ದು, 24x7 ರೀತಿಯಲ್ಲಿ ಸಖಿ ಕೇಂದ್ರದಿಂದ ಸೇವೆ ನೀಡಲಾಗುತ್ತಿದೆ.
— -ಪ್ರಿಯಾ ಆರ್., ಮುಖ್ಯಸ್ಥರು, ಸಖಿ ಕೇಂದ್ರ ಮಂಗಳೂರು