ಕೊಡಿಯಾಲಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹ 
ದಕ್ಷಿಣ ಕನ್ನಡ

ಮಂಗಳೂರು ಜೈಲ್ ಜಾಮರ್ ಸಮಸ್ಯೆ ಒಪ್ಪಿಕೊಂಡ ಸರ್ಕಾರ

ಮಂಗಳೂರು: ನಗರದ ಕೊಡಿಯಾಲಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾದ ಮೊಬೈಲ್ ಜಾಮರ್‌ನಿಂದ ನಗರ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಉದ್ಭವಿಸಿರುವ ಬಗ್ಗೆ ಶುಕ್ರವಾರ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿವೆ. ನಿವಾರಣೆಗೆ ಕೈಗೊಂಡಿರುವ ಪರಿಹಾರ ಕ್ರಮದ ಬಗ್ಗೆ ಡಿ.1ರಂದು ಅಧಿಕೃತವಾಗಿ ತಿಳಿಸುವಂತೆ ನ್ಯಾಯಾಲಯ ಸೂಚಿಸಿದೆ.
ಮಂಗಳೂರಿನ ವಕೀಲರ ಸಂಘ ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಸೂಚನೆ ಮೇರೆಗೆ ಟೆಲಿಕಾಂ ಕಂಪನಿಯ ಅಧಿಕೃತರು ಮಂಗಳೂರು ಜೈಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಜೈಲಿನಲ್ಲಿ ಅಳವಡಿಸಿರುವ ಜಾಮರ್‌ನಿಂದ ಉಂಟಾದ ನೆಟ್‌ವರ್ಕ್‌ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದರು.
ನ್ಯಾಯಾಲಯದ ವಿಚಾರಣೆ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದಾರೆ. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಈ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಬಂದಿಖಾನೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದೆ. ಅಲ್ಲದೆ ಜಾಮರ್‌ನಿಂದಾಗಿ ನೆಟ್‌ವರ್ಕ್ ಸಮಸ್ಯೆ ಇರುವ ಬಗ್ಗೆ ವಿವರ ನೀಡಿದೆ. ಇನ್ನೊಂದೆಡೆ ರಾಜ್ಯ ಸರ್ಕಾರದ ಬಂದಿಖಾನೆ ಇಲಾಖೆ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ಕೇಂದ್ರ ದೂರಸಂಪರ್ಕ ವಿಭಾಗಕ್ಕೆ ಪತ್ರ ಬರೆದಿದ್ದಾರೆ.
ವಿಚಾರಣೆ ವೇಳೆ ವಕೀಲರ ಸಂಘದ ಪರವಾಗಿ ವಾದ ಮಂಡಿಸಿದ ವಕೀಲ ಪಿ.ಪಿ.ಹೆಗ್ಡೆ, ಮಂಗಳೂರು ಜೈಲ್‌ನ ಒಳಗೆ ಜಾಮರ್ ಇದ್ದರೂ ಸರಿಯಾಗಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿದೆ. ಆದರೆ ಹೊರಗೆ 900 ಮೀಟರ್ ವ್ಯಾಪ್ತಿಯೊಳಗೆ ಕಚೇರಿ, ಕೋರ್ಟ್, ಸಂಘ ಸಂಸ್ಥೆಗಳು, ಬ್ಯಾಂಕ್, ಕಾಲೇಜುಗಳು ಇರುವಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಉಲ್ಭಣವಾಗಿದೆ. ಆದ್ದರಿಂದ ಜೈಲ್‌ನ ಜಾಮರ್‌ನ್ನು ತೆಗೆದುಹಾಕಬೇಕು ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಜೈಲ್‌ನಲ್ಲಿ ಜಾಮರ್ ಅಳವಡಿಕೆಯಿಂದ ಸಾರ್ವಜನಿಕರಿಗೆ ಉಂಟಾದ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮದ ಬಗ್ಗೆ ಡಿ.1 ರಂದು ಅಧಿಕೃತವಾಗಿ ತಿಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.