ಪುರುಷೋತ್ತಮ ಪೆರ್ಲ ಕಾಸರಗೋಡು
ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರನ್ನು ಬೇರ್ಪಡಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಅ.1ರಿಂದ ಮಂಗಳೂರು ಅಧಿಕೃತವಾಗಿ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳ್ಳಲಿದೆ. ಈ ಬೆಳವಣಿಗೆಯಿಂದಾಗಿ ಕಾಸರಗೋಡು ಸೇರಿದಂತೆ ಮಲಬಾರ್ ಭಾಗದ ರೈಲ್ವೆ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಜತೆಗೆ ಮಂಗಳೂರು ವಿಭಾಗ ಕೈತಪ್ಪಿರುವುದರಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಕಾಸರಗೋಡಿನಲ್ಲಿ ಹೊಸ ಟರ್ಮಿನಲ್ ಸ್ಥಾಪಿಸುವಂತೆ ಆಗ್ರಹ ಕೇಳಿಬಂದಿದೆ.
ಕೇರಳದ ಸಂಸದರು ಹಾಗೂ ರೈಲ್ವೆ ಸಚಿವರ ನಡುವಿನ ಚರ್ಚೆಗಳು ಕೇವಲ ಪ್ರಹಸನವಾಗಿ ಪರಿಣಮಿಸಿದ್ದು, ಪ್ರಯಾಣಿಕರ ಬೇಡಿಕೆಗಳು ರೈಲ್ವೆ ಮಂಡಳಿಯ ಗಮನ ಸೆಳೆಯುವಲ್ಲಿ ವಿಫಲವಾಗಿವೆ. ದಕ್ಷಿಣ ರೈಲ್ವೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಪಾಲಕ್ಕಾಡ್ ವಿಭಾಗದ ಅಭಿವೃದ್ಧಿ ಅಸಾಧ್ಯ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹೊಸ ವ್ಯವಸ್ಥೆ ಜಾರಿಗೆ ಬರುತ್ತಿರುವುದರಿಂದ ಪಾಲಕ್ಕಾಡ್ ವಿಭಾಗವು ಮಂಗಳೂರು ಪ್ರದೇಶದಲ್ಲಿದ್ದ ಗಣನೀಯ ಮೂಲಸೌಕರ್ಯಗಳನ್ನು ಕಳೆದುಕೊಳ್ಳಲಿದೆ. ಮುಖ್ಯವಾಗಿ 8 ಫ್ಲಾೃಟ್‌ಫಾರ್ಮ್‌ಗಳು, 3 ಪಿಟ್ ಲೈನ್‌ಗಳು ಹಾಗೂ 7 ಸ್ಟೇಬ್ಲಿಂಗ್ ಲೈನ್‌ಗಳ ಬಳಕೆ ಅವಕಾಶ ಕೈತಪ್ಪಲಿದೆ.
ಹೊಸ ಟರ್ಮಿನಲ್ ಸ್ಥಾಪನೆ?: ಮಂಗಳೂರು ಕೈತಪ್ಪಿರುವ ಹಿನ್ನೆಲೆಯಲ್ಲಿ ಮಂಜೇಶ್ವರ ಅಥವಾ ಕುಂಬಳೆಯಲ್ಲಿ ಹೊಸ ರೈಲ್ವೆ ಟರ್ಮಿನಲ್ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿವೆ. ಕುಂಬಳೆ ರೈಲ್ವೆ ನಿಲ್ದಾಣದ ಸುತ್ತಮುತ್ತ ರೈಲ್ವೆ ಇಲಾಖೆಯ 30 ಎಕರೆಗೂ ಹೆಚ್ಚು ಭೂಮಿ ಲಭ್ಯವಿದ್ದು, ಹೆಚ್ಚುವರಿ ಫ್ಲಾೃಟ್‌ಫಾರ್ಮ್ ನಿರ್ಮಾಣಕ್ಕೆ ಸೂಕ್ತವಾಗಿದೆ. ಕೆಲವು ಪ್ರದೇಶಗಳು ಈಗಾಗಲೇ ಒತ್ತುವರಿಯಾಗುತ್ತಿವೆ ಎಂಬ ದೂರುಗಳೂ ಇವೆ.
ಹೊಸಂಗಡಿಯಲ್ಲಿ ದೀರ್ಘಕಾಲದ ಬೇಡಿಕೆಯಾದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಯೋಜನೆ ಮೂಲೆಗುಂಪಾಗಿದೆ. ಕುಂಬಳೆ ಮತ್ತು ಮಂಜೇಶ್ವರದಲ್ಲಿ ಅಭಿವೃದ್ಧಿ ಯೋಜನೆಗಳ ವರದಿ ಸಿದ್ಧಪಡಿಸುವ ಜವಾಬ್ದಾರಿ ದಕ್ಷಿಣ ರೈಲ್ವೆಯ ಮೇಲಿದೆ. ಇದರೊಂದಿಗೆ ಮಂಜೇಶ್ವರ ರೈಲ್ವೆ ನಿಲ್ದಾಣದಲ್ಲಿ ರೈಲುಗಳ ನಿರ್ವಹಣೆಗಾಗಿ ಹೊಸ ಟರ್ಮಿನಲ್ ಸ್ಥಾಪಿಸುವುದು, ಪಾಲಕ್ಕಾಡ್ ನಗರದಲ್ಲಿ ರೈಲು ನಿರ್ವಹಣೆಯ ಪಿಟ್ ಲೈನ್‌ಗಳ ಸಂಖ್ಯೆ ಹೆಚ್ಚಿಸುವುದು, ನಿಲಂಬೂರ್, ಕುಂಬಳೆ ಮತ್ತು ಕಣ್ಣೂರ್‌ನಲ್ಲಿ ಹೆಚ್ಚುವರಿ ಫ್ಲಾೃಟ್‌ಫಾರ್ಮ್ ಮತ್ತು ಸ್ಟೇಬ್ಲಿಂಗ್ ಲೈನ್ ಅಳವಡಿಸುವುದು ಹಾಗೂ ನಿಲೇಶ್ವರದಲ್ಲಿ ಹೊಸ ಮೆಮು ಶೆಡ್ ನಿರ್ಮಿಸುವುದು ಪಲಕ್ಕಾಡ್ ವಿಭಾಗದ ಪ್ರಮುಖ ಬೇಡಿಕೆಗಳಾಗಿವೆ.
ನಿಲಂಬೂರ್-ಶೊರನೂರ್ ಮಾರ್ಗದ ಬಹುತೇಕ ನಿಲ್ದಾಣಗಳಲ್ಲಿ 16 ಬೋಗಿಗಳಿಗೆ ನಿಲುಗಡೆಗಿರುವ ಫ್ಲಾೃಟ್‌ಫಾರ್ಮ್‌ಗಳಿವೆ. 24 ಬೋಗಿಗಳಿಗೆ ನಿಲ್ಲುವ ರೀತಿಯಲ್ಲಿ ಫ್ಲಾೃಟ್‌ಫಾರ್ಮ್ ಉದ್ದ ವಿಸ್ತರಿಸುವ ನಿಟ್ಟಿನಲ್ಲಿ ಪಾಲಕ್ಕಾಡ್ ವಿಭಾಗ ಇನ್ನೂ ಟೆಂಡರ್ ಕರೆದಿಲ್ಲ. ಇದಲ್ಲದೆ, 40 ಎಕರೆ ಭೂಮಿ ಲಭ್ಯವಿರುವ ನಿಲಂಬೂರ್‌ನಲ್ಲಿ ಹೆಚ್ಚುವರಿಯಾಗಿ ಎರಡು ಫ್ಲಾೃಟ್‌ಫಾರ್ಮ್ ಮಂಜೂರು ಮಾಡುವ ಪ್ರಸ್ತಾವನೆಯನ್ನೂ ದಕ್ಷಿಣ ರೈಲ್ವೆ ಪರಿಗಣಿಸಿಲ್ಲ ಎಂದು ರೈಲ್ವೆ ಪ್ರಯಾಣಿಕರ ಸಂಘಟನೆಗಳು ಆರೋಪಿಸಿವೆ.
ಪಾಲಕ್ಕಾಡ್ ವಿಭಾಗದಿಂದ ಮಂಗಳೂರನ್ನು ಕೈಬಿಟ್ಟಿರುವುದು ಕೇರಳದ ಪಾಲಿಗೆ ಬಹುದೊಡ್ಡ ನಷ್ಟ. ಕಾಸರಗೋಡು ಜಿಲ್ಲೆಯಲ್ಲಿ ಕುಂಬಳೆ ಅಥವಾ ಮಂಜೇಶ್ವರದಲ್ಲಿ ಟರ್ಮಿನಲ್ ಸ್ಥಾಪನೆಗೆ ಈಗಲಾದರೂ ರೈಲ್ವೆ ಇಲಾಖೆ ಮುಂದಾಗಬೇಕು. ಜತೆಗೆ ಕಾಸರಗೋಡು ನಿಲ್ದಾಣದಲ್ಲಿ ಫ್ಲಾೃಟ್‌ಫಾರ್ಮ್‌ಗಳ ಸಂಖ್ಯೆಯನ್ನೂ ಹೆಚ್ಚಿಸಬೇಕಾಗಿದೆ.ಆರ್.ಪ್ರಶಾಂತ್, ಅಧ್ಯಕ್ಷ ಕಾಸರಗೋಡು ಜಿಲ್ಲಾ ರೈಲ್ವೆ ಪ್ರಯಾಣಿಕರ ಸಂಘಟನೆ