ಮಂಗಳೂರು: ಮಹಾತ್ಮ ಗಾಂಧೀಜಿಯವರ ಬದುಕೇ ಇತರರಿಗೆ ಮಾದರಿ. ಅವರು ಇತರರ ಮಾತನ್ನು ಆಲಿಸಿ ಪ್ರತಿ ವ್ಯಕ್ತಿಗೆ ಗೌರವ ನೀಡಿದ್ದರು. ಇದುವೇ ಸ್ವಾತಂತ್ರೃ ಹೋರಾಟದಲ್ಲಿ ಅವರನ್ನು ದೇಶದ ನಾಯಕನಾಗಿ ಮಾಡಿತ್ತು ಎಂದು ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಶುಕ್ರವಾರ ರಾಜಾಜಿ ಉದ್ಯಾನವನದಲ್ಲಿ ನಡೆದ ಮಹಾತ್ಮ ಗಾಂಧಿ ಜಯಂತಿ ಸಂದರ್ಭ ಗಾಂಧೀಜಿ ಪ್ರತಿಮೆಗೆ ಖಾದಿ ಹಾರ ಮತ್ತು ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಿ, ಅವರು ಮಾತನಾಡಿದರು.
ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಾಹೀದ್, ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಮಾತನಾಡಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್. ವಿ, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ಅಧೀಕ್ಷಕ ಅರುಣ್ ಕೆ., ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಮ್ ಪಾಂಡೆ, ಡಿಸಿಪಿ ಸ್ಯಾಮ್ ವರ್ಗಿಸ್, ಡಿ. ಡಿ. ಪಿ ಐ ಶಶಿಧರ್, ಭಾರತ್ ಸೇವಾ ದಳದ ಮುಖಂಡರಾದ ಬಶೀರ್ ಬೈಕಂಪಾಡಿ, ಟಿ.ಕೆ. ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸರ್ವ ಧರ್ಮ ಪ್ರಾರ್ಥನೆ ಹಾಗೂ ಗಾಂಧೀಜಿಯವರಿಗೆ ಪ್ರಿಯವಾದ ’ರಘುಪತಿ ರಾಘವ ರಾಜಾರಾಮ್’ ಹಾಗೂ ’ವೈಷ್ಣವ ಜನತೋ’ ಭಜನೆಗಳ ಗಾಯನ ಪ್ರಸ್ತುತಪಡಿಸಲಾಯಿತು.
ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಇಲಾಖೆ ಪ್ರಕಟಸಿರುವ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಸ್ನಾತಕ-ಸ್ನಾತಕೋತ್ತರ ಪದವಿ ವಿಭಾಗಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಸ್ವಾಗತಿಸಿದರು. ಸೈದುದ್ದೀನ್ ನಿರೂಪಿಸಿದರು.