ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಕೆಂಪು ಕಲ್ಲು ಸಾಗಾಟದ ಲಾರಿ ವಶಕ್ಕೆ

ಹರೀಶ ಎಂ.

ಮಂಗಳೂರು: ಕೇರಳದ ಕಾಸರಗೋಡಿನ ಬಂದ್ಯೋಡು ಎಂಬಲ್ಲಿಂದ ಕರ್ನಾಟಕಕ್ಕೆ ಅಕ್ರಮವಾಗಿ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಉಳ್ಳಾಲ ಪೊಲೀಸರು ತಲಪಾಡಿಯಲ್ಲಿ ವಶಪಡಿಸಿಕೊಂಡಿದ್ದಾರೆ.

ಪರವಾನಗಿ ಇಲ್ಲದೆ ಕಲ್ಲು ಸಾಗಾಟ ಮಾಡುತ್ತಿದ್ದ ಚಾಲಕ ಅಜೂಬ ಅಬ್ದುಲ್ಲ ನೆಬಾರಿ, ಮಾಲಿಕ ಸಿರಾಜ್ ಹಾಗೂ ಕೋರೆಯ ಮಾಲಿಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆ.19ರಂದು ಮಧ್ಯಾಹ್ನ 1 ಗಂಟೆ ವೇಳೆಗೆ ಪೊಲೀಸರು ತಲಪಾಡಿ ವಾಹನ ತಪಾಸಣಾ ಕೇಂದ್ರದ ಬಳಿ ಲಾರಿಯನ್ನು ತಡೆದಿದ್ದಾರೆ. ಲಾರಿಯಲ್ಲಿ ಸುಮಾರು 16 ಸಾವಿರ ರೂ. ಮೌಲ್ಯದ ಸುಮಾರು 500 ಕೆಂಪು ಕಲ್ಲುಗಳು ಪತ್ತೆಯಾಗಿದೆ. ಪರಿಶೀಲನೆ ವೇಳೆ ಯಾವುದೇ ಪರವಾನಗಿ ಇಲ್ಲದೆ ಸಾಗಿಸುತ್ತಿರುವುದು ಕಂಡು ಬಂದಿದೆ. ಲಾರಿ ಸಹಿತ ಕಲ್ಲುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಲಾರಿ ಮೌಲ್ಯ ಸುಮಾರು 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಸರ್ಕಾರಕ್ಕೆ ರಾಜಸ್ವ ಧನವನ್ನು ಪಾವತಿಸದೇ ಯಾವುದೇ ಪರವಾನಗಿ ಹಾಗೂ ದಾಖಲಾತಿಗಳಿಲ್ಲದೇ ಕೇರಳ ರಾಜ್ಯದಿಂದ ಕೆಂಪು ಕಲ್ಲುಗಳನ್ನು ಕಳ್ಳತನ ಮಾಡಿ ಅಕ್ರಮ ಸಾಗಾಟ ಮಾಡುತ್ತಿರುವ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.