ACCIDENT 
ದಕ್ಷಿಣ ಕನ್ನಡ

ಕಾರಿಗೆ ಡಿಕ್ಕಿಯಾಗಿ ಲಾರಿ ಪಲ್ಟಿ

ಓವರ್‌ಟೇಕ್ ಮಾಡುವ ಭರದಲ್ಲಿ ದುರ್ಘಟನೆ

ಪುತ್ತೂರು ಗ್ರಾಮಾಂತರ: ಲಾರಿ ಮತ್ತು ಕಾರೊಂದರ ನಡುವೆ ಡಿಕ್ಕಿಯಾಗಿ ಲಾರಿ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಟ್ಯಾರಿನಲ್ಲಿ ಗುರುವಾರ ನಡೆದಿದೆ. ವಾಹನವೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ರಸ್ತೆಗೆ ಮಗುಚಿ ಬಿದ್ದಿದೆ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಕಾರಿನ ಎದುರು ಭಾಗ ಹಾನಿಯಾಗಿದೆ. ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಸಂಪ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ಸುಗಮಗೊಳಿದರು.

ಪೆರ್ನಾಜೆ ವ್ಯಾಪ್ತಿಯಲ್ಲಿ ನಿಲ್ಲದ ಕಾಡಾನೆ ಉಪಟಳ

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಪ್ರದೇಶದಲ್ಲಿ ಕಾಡಾನೆ ಉಪಟಳ ಮುಂದುವರಿದಿದೆ. ದಿನಕ್ಕೊಂದು ಕಡೆ ಕೃಷಿ ತೋಟಗಳಿಗೆ ಲಗ್ಗೆಯಿಡುತ್ತಿರುವ ಕಾಡಾನೆ ಕೃಷಿ ಹಾನಿ ಮಾಡುತ್ತಿದ್ದು ಕೃಷಿಕರು ಆತಂಕದಲ್ಲೇ ಬದುಕುವಂತಾಗಿದೆ.

ಬುಧವಾರ ರಾತ್ರಿ ಪೆರ್ನಾಜೆಯ ಅಶೋಕ್ ಕುಮಾರ್ ಉಂಗ್ರುಪುಳಿತ್ತಾಯ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಬಾಳೆಗಿಡ, ಅಡಿಕೆ ಮರ, ತೆಂಗಿನ ಗಿಡಗಳನ್ನು ನಾಶಮಾಡಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಯಿಂದ ಕೃಷಿಕರು ಕಂಗೆಟ್ಟಿದ್ದಾರೆ.

ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೈರನ್ ಮೊಳಗಿಸಿ ತೆರಳುವುದು ಬಿಟ್ಟರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ. ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯರು, ಕಾಡಾನೆಗಳ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಂಚರಿಸುತ್ತಿದ್ದ ಕಾರಿನಲ್ಲಿ ಬೆಂಕಿ

ಕಾಸರಗೋಡು: ಉಪ್ಪಳ ಕೈಕಂಬ-ಬಾಯಾರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ನಿಲ್ಲಿಸಿ ಬೆಂಕಿ ನಂದಿಸಲಾಯಿತು. ಕೈಕಂಬ-ಬಾಯಾರು ರಸ್ತೆಯಲ್ಲಿ ಸೋಂಕಾಲು ಮಸೀದಿ ಬಳಿ ಕನ್ನಟಿ ಪಾರೆ ನಿವಾಸಿ ಜಾಸಿಂ ಎಂಬುವರ ಕಾರು ಬೆಂಕಿಗಾಹುತಿಯಾಗಿದೆ. ಅವರು ಉಪ್ಪಳಕ್ಕೆ ತೆರಳುತ್ತಿದ್ದ ಸಂದರ್ಭ ಸೋಂಕಾಲು ಮಸೀದಿ ಬಳಿ ತಲುಪಿದಾಗ ಕಾರಿನ ಇಂಜಿನ್ ಭಾಗದಿಂದ ಹೊಗೆ ಕಾಣಿಸಿಕೊಂಡಿದೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಕಾರು ನಿಲ್ಲಿಸಿ ತಪಾಸಣೆ ನಡೆಸಿದಾಗ ಯಂತ್ರದೊಳಗೆ ಬೆಂಕಿ ಕಾಣಿಸಿಕೊಂಡಿತ್ತು. ಉಪ್ಪಳದಿಂದ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಶಮನಗೊಳಿಸಿದರು.

ಇಲಿವಿಷ ಸೇವಿಸಿದ್ದ ಗೃಹಿಣಿ ಮೃತ್ಯು

ಕಾಸರಗೋಡು: ಇಲಿವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪಯ್ಯನ್ನೂರು ಬಳಿಯ ಎರವಂ ಬಿಯೋಳತ್ ನೆಡುಮಣ್ಣಿಲ್ ವೀಟಿಲ್ ಮೇಘಾ(32) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅ.7ರಂದು ರಾತ್ರಿ ಇಲಿ ವಿಷ ಸೇವಿಸಿ ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅವರನ್ನು ಕಣ್ಣೂರು ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.