ನರವಿಜ್ಞಾನ ರೋಗ ನಿರೋಧಕ ಕಾರ್ಯಾಗಾರವನ್ನು ಡಾ.ಆಶಾ ಕಿಶೋರ್ ಉದ್ಘಾಟಿಸಿದರು. ಪ್ರೊ.ಎಂ.ಎಸ್. ಮೂಡಿತ್ತಾಯ, ಡಾ.ಹರ್ಷ ಹಲಹಳ್ಳಿ, ಇಮ್ಮಾದ್ ಮೊಹಮ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ನರರೋಗಕ್ಕೆ ದೀರ್ಘಾವಧಿಯ ಚಿಕಿತ್ಸೆ ಮತ್ತು ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯ. ಅಡ್ಡ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ನೀಡುವುದು ಪ್ರಮುಖ ಸವಾಲಾಗಿದೆ ಎಂದು ಕೇರಳದ ಏಸ್ಟರ್ ಕ್ಲಸ್ಟರ್‌ನ ಪಾರ್ಕಿನ್ಸನ್ಸ್ ಆ್ಯಂಡ್ ಮೂವ್‌ಮೆಂಟ್ ಡಿಸಾರ್ಡರ್ಸ್ ಸೆಂಟರ್ ನಿರ್ದೇಶಕಿ ಡಾ.ಆಶಾ ಕಿಶೋರ್ ಹೇಳಿದರು.
ನಿಟ್ಟೆ (ಪರಿಗಣಿತ) ವಿಶ್ವವಿದ್ಯಾಲಯದ ಅಧೀನ ಸಂಸ್ಥೆ ದೇರಳಕಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ದೇರಳಕಟ್ಟೆ ಎ.ಬಿ.ಶೆಟ್ಟಿ ಮಹಾವಿದ್ಯಾಲಯದ ಆವಿಷ್ಕಾರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ’ಅಂತಾರಾಷ್ಟ್ರೀಯ ನರ ವಿಜ್ಞಾನ ರೋಗ ನಿರೋಧಕ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳ ಯುವಕರಲ್ಲೂ ನರರೋಗ ಕಂಡು ಬರುತ್ತಿದ್ದು ಇದನ್ನು ಗುರುತಿಸಲು ಈಗ ಕ್ಲಿನಿಕಲ್ ಪರೀಕ್ಷೆಗಳ ಜತೆ ಸಿಟಿಸ್ಕ್ಯಾನ್, ಬಯೋಗ್ರಾಂ ಸೇರಿದಂತೆ ಹಲವು ಆಧುನಿಕ ವಿಧಾನಗಳನ್ನು ಬಳಸಲಾಗುತ್ತಿದೆ. ಹಲವು ಹೊಸ ಚಿಕಿತ್ಸೆ ವಿಧಾನಗಳು ಅಭಿವೃದ್ಧಿಯಾಗಿವೆ. ಹೊಸ ತಲೆಮಾರಿನ ಸಂಶೋಧನೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ನಿಟ್ಟೆ ವಿವಿ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ.ಹರ್ಷ ಹಲಹಳ್ಳಿ, ಕರ್ನಾಟಕ ಮೆಡಿಕಲ್ ಕೌನ್ಸಿಲ್ ಪರಿವೀಕ್ಷಕ ಇಮ್ಮಾದ್ ಮೊಹಮ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು.
ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ಲೇಖಾ ಪಂಡಿತ್ ಸ್ವಾಗತಿಸಿದರು. ಡಾ.ಅಲೆಕ್ಸಾಂಡರ್ ಲೋಬೋ ಮತ್ತು ಡಾ.ಸುಹಾನ್ ನಿರೂಪಿಸಿದರು. ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್ ಡಾ.ಸಂದೀಪ್ ರೈ ವಂದಿಸಿದರು.
ಭಾರತದಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ ಸೇರಿದಂತೆ ಕೆಲವು ನರವಿಜ್ಞಾನ ರೋಗಗಳು ಎಲ್ಲ ವಯೋಮಾನದವರಲ್ಲೂ ಕಾಣಿಸುತ್ತಿದೆ. ರೋಗದ ಸ್ವರೂಪ ಬದಲಿಸುವ ಚಿಕಿತ್ಸೆಯ ಕುರಿತು ಸಂಶೋಧನೆಗಳು ನಿರಂತರ ನಡೆಯುತ್ತಿವೆ. ವೈದ್ಯರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಿದ್ಧತೆಯೊಂದಿಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡಬೇಕು.