ಮಹಾನಗರ ಪಾಲಿಕೆ ಆಡಳಿತ ಕಚೇರಿ 
ದಕ್ಷಿಣ ಕನ್ನಡ

ಮನಪಾ ಪೌರ ಕಾರ್ಮಿಕರ ಹೆಸರಲ್ಲಿ ಕೋಟಿಗಟ್ಟಲೆ ಸಾಲ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಹಕಾರಿ ಬ್ಯಾಂಕ್ ಶಾಖೆಗಳಿಂದ 2 ಕೋಟಿ ರೂ. ಅಧಿಕ ಸಾಲ ಪಡೆದು ಮರುಪಾವತಿಸದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬರ್ಕೆ ಪೊಲೀಸ್ ಠಾಣೆಯಲ್ಲಿ 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿ ತನಿಖೆ ಆರಂಭಗೊಂಡಿದೆ.
ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಯವರ ಹೆಸರಿನಲ್ಲಿ ನಕಲಿ ಮೊಹರು, ಸಹಿ, ವೇತನ ಪಟ್ಟಿ ಮೊದಲಾದ ನಕಲಿ ಕಾಗದ ಪತ್ರಗಳನ್ನು ತಯಾರಿಸಿ 2022 ಜ.21 ಮತ್ತು 2024 ಜೂ.26ರ ನಡುವೆ ಒಟ್ಟು 95 ಮಂದಿ ಸಾಲ ಪಡೆದಿದ್ದಾರೆ. ಆದರೆ ನಕಲಿ ದಾಖಲೆ ಸೃಷ್ಟಿಸಿದ ಘಟನೆ ಗಮನಕ್ಕೆ ಬಂದು ಎರಡು ವರ್ಷವಾದರೂ ಪಾಲಿಕೆ ಅಧಿಕಾರಿಗಳು ಪ್ರಕರಣ ದಾಖಲಿಸದೇ ಇರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯ ವ್ಯಕ್ತವಾಗಿದೆ.
ಅನಿತಾ ಎಂ. ಅತ್ತಾವರ, ಲತೀಫ್ ಬಾಬುಗುಡ್ಡೆ, ತೇಜಸ್ವಿನಿ ಅತ್ತಾವರ, ಪವನ್ ವಿ.ಎಸ್., ದೇವಿಪ್ರಸಾದ್ ಜಲ್ಲಿಗುಡ್ಡೆ, ಕವಿತಾ ಬಾರೆಬೈಲ್, ದಯಾನಂದ ನಂದಿಕೂರು, ದಿವಾಕರ ನಡುಗೋಡು, ಲತಾ ಪ್ರಕಾಶ್ ಕುದ್ಕೋರಿಗುಡ್ಡೆ, ನಯನಾ ಅವರನ್ನು ಈ ಪ್ರಕರಣದ ಆರೋಪಿಗಳೆಂದು ಗುರುತಿಸಲಾಗಿದೆ.
* ಗೊತ್ತಾಗಿದ್ದು ಹೇಗೆ?
ಸಹಕಾರಿ ಬ್ಯಾಂಕ್‌ನ ಮಂಗಳೂರು ಪರಿಸರದ ನಾಲ್ಕು ಶಾಖೆಗಳಿಂದ ಸಾಲ ಪಡೆಯಲಾಗಿದೆ. ಸಾಲಗಾರರು ಮರುಪಾವತಿ ಮಾಡದೆ ಇದ್ದಾಗ ಬ್ಯಾಂಕ್ ಮ್ಯಾನೇಜರ್ ಅವರು ಪಾಲಿಕೆಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಸಾಲ ಪಡೆದವರು ಮರು ಪಾವತಿಸಲು ಹೇಳುವಂತೆ ಅವರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭ ಬ್ಯಾಂಕ್‌ನಿಂದ ಸಾಲಗಾರರ ಪಟ್ಟಿ ಪಡೆದು ಪರಿಶೀಲಿಸಿದಾಗ ಅದರಲ್ಲಿ ಪೌರ ಕಾರ್ಮಿಕರಲ್ಲದವರ ಹೆಸರುಗಳಿರುವುದು ಗಮನಕ್ಕೆ ಬಂದಿದೆ. ಅದರಲ್ಲಿ ಬಸ್ ಚಾಲಕರು, ಮೀನು ಮಾರಾಟ ಮಾಡುವವರು, ಆಟೋ ಚಾಲಕರು, ಬೀಡಿ ಕಾರ್ಮಿಕರು ಮೊದಲಾದವರು ಇರುವುದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಹಕ್ಕು ಮೂಲಕ ದಾಖಲೆ ಪಡೆದಾಗ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
* ಯಾರ ಹೆಸರಲ್ಲಿ ದಾಖಲೆ ಸೃಷ್ಟಿ?
ಚಾಲಕ, ಜವಾನ, ವಾಚ್‌ಮೆನ್, ಪೌರ ಕಾರ್ಮಿಕ, ಪಂಪ್ ಆಪರೇಟರ್, ಎಸ್.ಡಿ.ಸಿ., ವಾಲ್‌ಮ್ಯಾನ್, 2ನೇ ದರ್ಜೆ ಗುಮಾಸ್ತ, ಬಿಲ್ ಕಲೆಕ್ಟರ್ ಮೊದಲಾದವರ ಹೆಸರಿನಲ್ಲಿ ಸಾಲ ಪಡೆಯಲಾಗಿದೆ. ಮಂಗಳೂರು ತಾಲೂಕು ಹೊರತುಪಡಿಸಿ ಪುತ್ತೂರು, ಕನ್ಯಾನ, ಪಡುಬಿದ್ರಿ ಮೊದಲಾದ ಕಡೆಯವರು ಇದ್ದಾರೆ. ಈ ಪೈಕಿ ಯಾರೊಬ್ಬರೂ ಮಹಾನಗರ ಪಾಲಿಕೆಯ ನೈಜ ಕೆಲಸಗಾರರಲ್ಲ ಎಂಬುದು ಗಮನಾರ್ಹ.
* ಪಾಲಿಕೆ ಆಯುಕ್ತರು ಮೌನ
ಪಾಲಿಕೆಯ ಆರೋಗ್ಯಾಧಿಕಾರಿಯವರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ಪಡೆದಿರುವುದು ಈ ಮೊದಲೇ ಪಾಲಿಕೆಯ ಆಯುಕ್ತರ ಗಮನಕ್ಕೆ ಬಂದಿದೆ. ಸಾಲ ಮರುಪಾವತಿಯಾಗದೇ ಇದ್ದಾಗ ಬ್ಯಾಂಕ್‌ನವರು ವೇತನ ಪ್ರಮಾಣಪತ್ರದ ಆಧಾರದಲ್ಲಿ ಮನಪಾ ಸಿಬ್ಬಂದಿಗಳೆಂದು ಸಾಲ ಪಡೆದವರ ದಾಖಲೆ ಕೇಳಿದ್ದಾರೆ. ಆಗ ಪಾಲಿಕೆ ಆಯುಕ್ತರೇ ಅಂತಹ ವ್ಯಕ್ತಿಗಳು ಪಾಲಿಕೆಯಲ್ಲಿ ಇಲ್ಲ ಎಂದು ಲಿಖಿತವಾಗಿ ನೀಡಿದ್ದಾರೆ. ಇಷ್ಟೊಂದು ಗಂಭೀರ ಪೋರ್ಜರಿ ಪ್ರಕರಣ ನಡೆದಿರುವಾಗ ಪಾಲಿಕೆ ಆಯುಕ್ತರು ಕಾನೂನು ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
* ಕಮಿಷನ್‌ಗೆ ಕೃತ್ಯ
ನಕಲಿ ದಾಖಲೆ ಸೃಷ್ಟಿಸಿ ಪ್ರತಿಯೊಬ್ಬರ ಹೆಸರಿನಲ್ಲೂ 2 ಲಕ್ಷ ರೂ. ತನಕ ಸಾಲ ಪಡೆಯಲಾಗಿದೆ. ಯಾರ ಹೆಸರಿನಲ್ಲಿ ಸಾಲ ಪಡೆಯಲಾಗಿದೆಯೋ ಅವರಿಗೆ ಪೂರ್ಣ ಹಣ ಸೇರಿಲ್ಲ. ಈ ಕೃತ್ಯದಲ್ಲಿ ಭಾಗಿಯಾದವರು ಹಣದ ಅಗತ್ಯತೆವುಳ್ಳ ಮುಗ್ದರನ್ನು ಬಲೆಗೆ ಬೀಳಿಸಿ, ಅವರ ಹೆಸರನ್ನು ಬಳಸಿಕೊಂಡು ಸಾಲ ತೆಗೆಸಿ ಕೆಲವರಿಗೆ 2 ಲಕ್ಷದಲ್ಲಿ 50 ಸಾವಿರ ರೂ., ಇನ್ನು ಕೆಲವರಿಗೆ 1 ಲಕ್ಷ ರೂ. ನೀಡಿ ಉಳಿದ ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
* ಪಾಲಿಕೆಯೊಳಗಿನವರ ಕೈವಾಡ?
ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಲು ಏಜೆಂಟ್‌ಗಳಿಗೆ ಸೀಲ್, ಸಹಿ ಮತ್ತಿತರ ದಾಖಲೆ ನೀಡಿ ಸಹಕರಿಸಿದವರು ಪಾಲಿಕೆಯಲ್ಲಿ ಕೆಲಸ ಮಾಡುವವರೇ ಆಗಿದ್ದಾರೆ. ಅವರನ್ನು ಗುರುತಿಸಿ ಪೊಲೀಸರು ವಿಚಾರಣೆಗೆ ಕರೆದಿದ್ದು, ಅವರು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಸಾಲಗಾರರನ್ನು ಗುರುತಿಸಿ ಅವರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ವಂಚನೆ ಜಾಲದಲ್ಲಿ ಯಾರೆಲ್ಲಾ ತೊಡಗಿಸಿಕೊಂಡಿದ್ದಾರೆ ಎಂಬುದು ವಿಸ್ತೃತ ತನಿಖೆಯಿಂದ ಗೊತ್ತಾಗಲಿದೆ. ತನಿಖೆ ಪ್ರಗತಿಯಲ್ಲಿರುವುದರಿಂದ ಪೊಲೀಸರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.