ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಬಜಪೆ ಹಫ್ತಾ ವಸೂಲಿಗೆ ಜೀವ ಬೆದರಿಕೆ ಮೂವರು ಆರೋಪಿಗಳ ವಿರುದ್ಧ ಕೋಕಾ ಜಾರಿ

ಮಂಗಳೂರು: ಬಜಪೆಯಲ್ಲಿ ಪಟಾಕಿ ವ್ಯಾಪಾರಸ್ಥರಿಗೆ ಬೆದರಿಕೆಯೊಡ್ಡಿ ಹಫ್ತಾ ರೀತಿಯಲ್ಲಿ ಸುಮಾರು 15 ಸಾವಿರ ರೂ. ಮೌಲ್ಯದ ಪಟಾಕಿ ಕೊಂಡೊಯ್ದ ಮೂವರು ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಜಾರಿಗೊಳಿಸಲಾಗಿದೆ.
ಪ್ರಮುಖ ಆರೋಪಿ ಪ್ರಶಾಂತ್, ಗಣೇಶ್ ಹಾಗೂ ಅಶ್ವಿತ್ ಅವರ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಶಾಂತ್ ವಿರುದ್ಧ ಕೊಲೆ, ನಾಲ್ಕು ಕೊಲೆ ಯತ್ನ ಸೇರಿದಂತೆ ಒಟ್ಟು 14 ಪ್ರಕರಣ ದಾಖಲಾಗಿದೆ. ಕೆಲವು ಪ್ರಕರಣಗಳು ಖುಲಾಸೆಗೊಂಡಿವೆ.
ಗಣೇಶ್ ವಿರುದ್ಧ ಎರಡು ಕೊಲೆ ಯತ್ನ ಸೇರಿದಂತೆ 4 ಪ್ರಕರಣಗಳಿವೆ. ಮೂರು ಪ್ರಕರಣಗಳು ಖುಲಾಸೆಗೊಂಡಿವೆ. ಅಶ್ವಿತ್ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಈತ ಇಬ್ಬರು ಅಪರಾಧಿಗಳ ಜತೆ ಸೇರಿಕೊಂಡು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಆತನ ಮೇಲೂ ಕೊಕಾ ಕಾಯ್ದೆ ಹೇರಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಅ.22ರಂದು ಸಂಜೆ 4 ಗಂಟೆಗೆ ಓಂ ಪ್ರಸಾದ್ ಅವರು ದಾಮೋದರ ಅವರ ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಶಾಂತ್ ಮತ್ತು ಅಶ್ವಿತ್ ಅವರು ಬಂದು ಹಣ ಇಲ್ಲದೆ ಪಟಾಕಿ ಹಫ್ತಾ ನೀಡುವಂತೆ ಕೇಳಿದ್ದಾರೆ. ಇಲ್ಲದಿದ್ದರೆ ಅಂಗಡಿಗೆ ಬೆಂಕಿ ಹಚ್ಚುತ್ತೇವೆ ಎಂದು ಅವಾಚ್ಯವಾಗಿ ಬೈದು ಅಂಗಡಿಯೊಳಗಿದ್ದ ಪಟಾಕಿ ಬಾಕ್ಸ್‌ಗಳನ್ನು ಎಸೆದಿದ್ದಾರೆ. ಇದರಿಂದ ಭಯಗೊಂಡ ಅಂಗಡಿ ಮಾಲೀಕ ದಾಮೋದರ ಅವರು ಸುಮಾರು 15 ಸಾವಿರ ರೂ. ಮೌಲ್ಯದ ಪಟಾಕಿ ನೀಡಿದ್ದಾರೆ. ಈ ವಿಚಾರ ಪೊಲೀಸರಿಗೆ ತಿಳಿಸಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿ ತೆರಳಿದ್ದರು. ಇದರಿಂದ ಭಯಗೊಂಡ ದಾಮೋದರ್ ಅವರು ದೂರು ನೀಡಲು ಮುಂದೆ ಬಾರದ ಕಾರಣ ಓಂ ಪ್ರಸಾದ್ ಅವರು ಬಜಪೆ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ.