ಮೂಳೂರು ಗ್ರಾಮದ ಚಿಲಿಂಬಿಗುಡ್ಡೆಯಲ್ಲಿರುವ ಹೇಮಾ ಅವರ ಮನೆ. 
ದಕ್ಷಿಣ ಕನ್ನಡ

ಗುಡ್ಡದ ಮೇಲೆ ಬಡಜೀವದ ಬದುಕು

ಪ್ರಮುಖ ಮುಖ್ಯಾಂಶಗಳು

  • ಗುಡ್ದದ ಮೇಲೆ ಜೀವನ
  • ಮೂಳೂರಿನ ಕೊರಗ ಸಮುದಾಯದ ವೃದ್ಧೆಯ ಜೀವನ 60 ವರ್ಷಗಳಿಂದ ಅತಂತ್ರ
ಸರಿಯಾದ ಮನೆ ಇಲ್ಲದೆ, ಸರ್ಕಾರದ ಸವಲತ್ತುಗಳಿಲ್ಲದೆ ಗುಡ್ಡದ ಮೇಲೊಂದು ಹರಕಲು ಮನೆ ಮಾಡಿಕೊಂಡು 60 ವರ್ಷಗಳಿಂದ ಕಷ್ಟದ ಜೀವನ ಸಾಗಿಸುತ್ತಿರುವ ಕೊರಗ ಜನಾಂಗದ(ಎಸ್‌ಟಿ) 70 ವರ್ಷದ ಏಕಾಂಗಿ ವೃದ್ಧೆಯ ಕಷ್ಟಕ್ಕೆ ಇನ್ನಾದರೂ ಸರ್ಕಾರ ಸ್ಪಂದಿಸಬೇಕಿದೆ. ಅನಕ್ಷರಸ್ಥೆಯಾದ ಆಕೆಗೆ ಸರ್ಕಾರಿ ಕಚೇರಿಗಳ ಮುಂದೆ ನಿಲ್ಲುವ ಅಥವಾ ಅಲೆದಾಡುವ ಶಕ್ತಿ ಇಲ್ಲ. ಇದು ಗುರುಪುರ ಪಂಚಾಯಿತಿ ವ್ಯಾಪ್ತಿಯ ಮೂಳೂರು ಗ್ರಾಮದ ಚಿಲಿಂಬಿಗುಡ್ಡೆ ಕೊರಗ ಜನಾಂಗದ ವಯೋವೃದ್ಧೆಯೊಬ್ಬರ ದುರಂತ ಜೀವನ.
ತಂದೆ, ತಾಯಿ, ಅಣ್ಣನನ್ನು ಕಳೆದುಕೊಂಡಿರುವ ಅವಿವಾಹಿತ ಹೇಮಾ(70) ಅವರು ಮೂಳೂರು ವಾರ್ಡ್ 1ರ ಚಿಲಿಂಬಿಗುಡ್ಡೆಯ ಗುಡ್ಡದ ಮೇಲೆ ಮಣ್ಣಿನ ಗೋಡೆ, ಟಾರ್ಪಲ್ ಹಾಸಲಾದ ಹರುಕು-ಮುರುಕು ಹಳೇ ಮನೆಯಲ್ಲಿ ಬದುಕು ಸವೆಸುತ್ತಿದ್ದಾರೆ. ಹಿಂದೆ ಬೀಡಿ ಕಟ್ಟುತ್ತಿದ್ದ ಅವರಿಗೆ ಬೀಡಿ ಪಿಂಚಣಿ 600 ರೂ. ಮತ್ತು ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತಿದೆ. ಅವರಲ್ಲಿ ಕೆಲವು ವರ್ಷಗಳ ಹಿಂದೆ ಪಡಿತರ ಚೀಟಿ ಇದ್ದರೂ, ಇತ್ತೀಚಿನ ವರ್ಷದಲ್ಲಿ ಕಣ್ಣು ಮಂಜಾಗಿದ್ದ ಹಿನ್ನೆಲೆಯಲ್ಲಿ ಅವೆಲ್ಲನ್ನೂ ಕಳೆದುಕೊಂಡಿದ್ದರು. ನಂತರದ ದಿನಗಳಲ್ಲಿ ಅವರು ಹೊಸ ದಾಖಲೆಗಳಿಲ್ಲದೆ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಮನೆಯ ಹತ್ತಿರದಲ್ಲಿ ಅರ್ಧಕ್ಕೆ ನಿರ್ಮಿಸಲಾದ ರಸ್ತೆ ಹೇಮಾರ ಮನೆಯಾಗಿ ಮುಂದಕ್ಕೆ ನಿರ್ಮಾಣಗೊಂಡರೆ ಹಿಂದಿರುವ ಮೂರ‌್ನಾಲ್ಕು ಎಸ್‌ಸಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ.

ನೀರಿಲ್ಲ, ವಿದ್ಯುತ್ ಇಲ್ಲ

ಹೇಮಾರಿಗೆ ಪಂಚಾಯಿತಿ ನೀರಿಲ್ಲ, ವಿದ್ಯುತ್ ಮೊದಲೇ ಇಲ್ಲ. ಈ ಕಾಲದಲ್ಲೂ ಶೌಚಗೃಹವಿಲ್ಲದೆ ಬದುಕುತ್ತಿರುವ ಆಕೆಯ ಸ್ಥಿತಿ ನಿಜಕ್ಕೂ ದಯನೀಯ. ಬಹಿರ್ದೆಸೆಗೆ ಗುಡ್ಡವೇ ಆಸರೆ. ನೆರೆಮನೆಯ ಚಿತ್ತರಂಜನ್ ಪೂಜಾರಿಯವರು ಕುಡಿಯುವ ನೀರು ಕೊಡುತ್ತಿದ್ದರೆ, ಆಕೆಯ ಕಷ್ಟಕ್ಕೆ ನೆರೆಮನೆಯವರು ಸ್ಪಂದಿಸುತ್ತಿದ್ದಾರೆ.
ಹೇಮಾ ಅವರನ್ನು ನೀವೂ ಸಂಪರ್ಕಿಸಬಹುದು. ಪಿಂಚಣಿಗಾಗಿ ತೆರೆಯಲಾದ ಗುರುಪುರ ಕೆನರಾ ಬ್ಯಾಂಕ್ ಖಾತೆ ವಿವರ. ಹೇಮಾ, ಕೊರಗಪ್ಪರ ಪುತ್ರಿ, ಡೋರ್ ನಂಬ್ರ 4-245, ಚಿಲಿಂಬಿಗುಡ್ಡೆ, ಮೂಳೂರು ಗ್ರಾಮ, ಗುರುಪುರ. ಖಾತೆ ಸಂಖ್ಯೆ: 01242200069030. ಐಎಫ್‌ಎಸ್‌ಸಿ ನಂಬ್ರ: ಎಸ್‌ವೈಎನ್‌ಬಿ0000124. ಮೊಬೈಲ್ ಸಂಖ್ಯೆ: 9071818823.
"

ನನ್ನ ಜೀವನಕ್ಕೆ ಆಸರೆಯಾಗಬೇಕೆಂಬ ನಿಟ್ಟಿನಲ್ಲಿ ಪಂಚಾಯಿತಿ ಸದಸ್ಯ ಸುನೀಲ್ ಕುಮಾರ್ ಸುವರ್ಣ ಕಷ್ಟಪಡುತ್ತಿದ್ದಾರೆ. ಈಗಾಗಲೇ ಜಾತಿ ಸರ್ಟಿಫಿಕೆಟ್, ಹೊಸ ಪಡಿತರ ಚೀಟಿ, ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದಾರೆ. ಜಾತಿ ಸರ್ಟಿಫಿಕೆಟ್ ಸಿಕ್ಕ ಬಳಿಕ ಸೋಮವಾರದಿಂದ ಪಂಚಾಯಿತಿಯಿಂದ ನೀರಿನ ಟ್ಯಾಂಕ್ ಸಿಕ್ಕಿದೆ. ಸದ್ಯ ಅಗತ್ಯ ದಾಖಲೆಗಳಿದ್ದು, ಇನ್ನಾದರೂ ಸವಲತ್ತು ಸಿಗಬಹುದು ಎಂಬ ಆಶಾಭಾವನೆಯಲ್ಲಿದ್ದೇನೆ. ವಯಸ್ಸಾಗಿದೆ, ಈಗಾಗಲೇ ಇವೆಲ್ಲ ಸಿಗಬೇಕಿತ್ತು. ಜೀವಿತದ ಕೊನೆಗಾಲದಲ್ಲಾದರೂ ಸರ್ಕಾರ ನನ್ನತ್ತ ಕಣ್ತೆರೆದು ನೋಡಿದರೆ ವಾಸ್ತವ ತಿಳಿಯುವುದು. ಮಳೆಗಾಲದಲ್ಲಿ ಮನೆ ಸೋರುತ್ತದೆ. ಗಾಳಿ-ಮಳೆ ಚಳಿ ಸಹಿಸಿಕೊಂಡು ಬದುಕಿಕುತ್ತಿದ್ದೇನೆ. ಎಲ್ಲ ಸಂದರ್ಭದಲ್ಲೂ ನೆರೆಮನೆಯರು ಸಹಾಯ ಮಾಡುತ್ತಿದ್ದಾರೆ.

"

ಹೇಮಾ ಅವರಿಗೆ ಜಾತಿ ಸರ್ಟಿಫಿಕೆಟ್, ಪಡಿತರ ಚೀಟಿ ಮತ್ತು ಆಧಾರ ಕಾರ್ಡ್ ಮಾಡಲು ಕಳೆದ ಮೂರ‌್ನಾಲ್ಕು ವರ್ಷಗಳಿಂದ ಪ್ರಯತ್ನಿಸಿದ್ದೆ. ಈಗ ಅವು ಸಿಕ್ಕಿವೆ. ವೃದ್ಧಾಪ್ಯದಲ್ಲಿ ಏಕಾಂಗಿಯಾಗಿ ಜೀವನ ಸಾಗಿಸುತ್ತಿರುವ ಅವರ ಹರಕಲು ಮನೆಗೆ ವಿದ್ಯುತ್ ದೀಪ, ರಸ್ತೆ ನಿರ್ಮಾಣ, ಶೌಚಗೃಹ ಮತ್ತು ಮನೆ ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ. ಇದೀಗ ಪಂಚಾಯಿತಿ ಅನುದಾನದಿಂದ ಶೌಚಗೃಹ ನಿರ್ಮಿಸುತ್ತಿದ್ದೇನೆ.

ಕೊರಗ ಜನಾಂಗದ ವೃದ್ಧೆಗೆ ಇನ್ನೂ ಮೂಲಸೌಕರ್ಯ ಲಭಿಸಿಲ್ಲ ಮತ್ತು ಉಳಿದುಕೊಳ್ಳಲು ಸರಿಯಾದ ಸೂರಿಲ್ಲ ಎಂಬುದು ಕೇಳಿ ದುಃಖವಾಯಿತು. ಅವರಿಗೆ ಮನೆ ನಿರ್ಮಿಸಿ ಕೊಡುವ ಜವಾಬ್ದಾರಿ ನನಗೆ ಬಿಡಿ. ಸರ್ಕಾರದಿಂದ ಕೊರಗ ಜನಾಂಗಕ್ಕೆ ಯಾವೆಲ್ಲ ಸವಲತ್ತು ಸಿಗಬೇಕೋ ಅವು ಮುಂದಿನ ದಿನಗಳಲ್ಲಿ ಸಿಗುವಂತೆ ಪ್ರಯತ್ನಿಸುವೆ.