ದಕ್ಷಿಣ ಕನ್ನಡ

ಮಾಡೂರು ಯುಸೂಫ್ ಕೊಲೆ ಪ್ರಕರಣ

ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ 2015ರಲ್ಲಿ ನಡೆದ ಮಾಡೂರು ಯುಸೂಫ್ ಕೊಲೆ ಪ್ರಕರಣದಲ್ಲಿ ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2015ರ ನ.2ರಂದು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕೈದಿಗಳ ನಡುವೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಮಾಡೂರು ಯೂಸೂಫ್ ಎಂಬಾತನು ತೀವ್ರ ಗಾಯಗೊಂಡು ಮೃತಪಟ್ಟಿದ್ದ.

ಪ್ರಕರಣದಲ್ಲಿ ಸೂರಿಂಜೆಯ ಲಿತೇಶ್ ಪೂಜಾರಿ ಅಲಿಯಾಸ್ ಲಿತ್ತು, ಸುರತ್ಕಲ್ ಮಧ್ಯದ ಶೋಭರಾಜ್ ಅಲಿಯಾಸ್ ಶೋಭಿ, ಶಿರಬೂರಿನ ಯುವರಾಜ್, ಉಳಾಯಿಬೆಟ್ಟುವಿನ ಪ್ರದೀಪ್, ಸುಳ್ಯ ಬಾಳುಗೋಡುವಿನ ಉಮೇಶ್ ಕೊಂಬಾರ್ ಅಲಿಯಾಸ್ ಉಮೇಶ್ ಕುಂಬಾರ ದೋಷಿಗಳು ಎಂದು ವಿಚಾರಣೆ ಪೂರ್ಣಗೊಳಿಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಸೆ.28ರಂದು ತೀರ್ಪುನೀಡಿದ್ದರು. ಅ.1ರಂದು ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶರು ಐವರಿಗೆ ಜೀವಾವಧಿ ಶಿಕ್ಷೆ ಹಾಗೂ 76,000 ರೂ. ದಂಡ ವಿಧಿಸಿದ್ದಾರೆ.

ಈ ಪ್ರಕರಣದಲ್ಲಿ ಆಗಿನ ಮಂಗಳೂರು ಕೇಂದ್ರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ತಿಲಕ್ ಚಂದ್ರ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಮೋಹನ್ ಕುಮಾರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ.