ಪಾಲೆತಡ್ಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು. ಬೆಳ್ಳಿಪಾಡಿ ರಾಜೇಂದ್ರ ರೈ, ಜ್ಯೋತಿರಾಜ್, ಶ್ಯಾಮಲಾ, ವಾರಿಜಾ ನಾಗೇಶ್ ಮೊದಲಾದವರು ಇದ್ದರು. 
ದಕ್ಷಿಣ ಕನ್ನಡ

ಸರ್ಕಾರಿ ಶಾಲೆಗಳ ಉಳಿವಿಗೆ ಕೈಜೋಡಿಸೋಣ

ವಿದ್ಯಾಸಂಸ್ಥೆಗೆ ಕುಡಿಯುವ ನೀರಿನ ಘಟಕ ಕೊಡುಗೆ

ಕಡಬ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣದ ಜತೆಗೆ ಬದುಕು ಕಟ್ಟಿಕೊಳ್ಳುವ ಧೈರ್ಯವನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಜೀವನದ ಯಾವುದೇ ಸವಾಲು ಸಮರ್ಥವಾಗಿ ಎದುರಿಸುವ ಶಕ್ತಿ ಹೊಂದಿರುತ್ತಾರೆ. ಆದುದರಿಂದ ನಾವೆಲ್ಲರೂ ಸರ್ಕಾರಿ ಶಾಲೆಗಳ ಉಳಿವಿಗಾಗಿ ಕೈಜೋಡಿಸಬೇಕು ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಬೆಳ್ಳಿಪಾಡಿ ರಾಜೇಂದ್ರ ರೈ ಹೇಳಿದರು.

ತಾಲೂಕಿನ ಮರ್ದಾಳದ ಪಾಲೆತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಕ್ ಆಫ್ ಬರೋಡ ಸಂಯೋಜಿತ ಸಂಸ್ಥೆ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್, ಮುಖ್ಯಶಿಕ್ಷಕಿ ಶ್ಯಾಮಲಾ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷೆ ವಾರಿಜಾ ನಾಗೇಶ್ ಮಾತನಾಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಶರೀಫ್ ಮರುವಂತಿಲ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಆಫ್ ಬರೋಡ ಮರ್ದಾಳ ಶಾಖೆಯ ಪ್ರಬಂಧಕ ರಾಮಚಂದ್ರ ಪ್ರಸಾದ್, ಅಧಿಕಾರಿ ಮಹೇಶ್, ಜೆಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ., ಮರ್ದಾಳ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕ ನಾಗೇಶ್ ಗೌಡ ಉಪಸ್ಥಿತರಿದ್ದರು. ರಸಪ್ರಶ್ನೆ ಸ್ಪರ್ಧೆ ವಿಜೇತ ವಿದ್ಯಾರ್ಥಿ ಚಿರಾಗ್‌ಗೆ ಪ್ರತಿಷ್ಠಾನದ ವತಿಯಿಂದ ಬಹುಮಾನ ನೀಡಲಾಯಿತು.

ಬೆಳ್ಳಿಪಾಡಿ ರಾಜೇಂದ್ರ ರೈ, ಜ್ಯೋತಿರಾಜ್ ಹಾಗೂ ರಾಮಚಂದ್ರ ಪ್ರಸಾದ್ ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕ ಪ್ರವೀಣ್ ನಿರೂಪಿಸಿದರು. ಶಿಕ್ಷಕಿ ಸ್ವಾತಿ ವಂದಿಸಿದರು