‘ಕಾಸರಗೋಡಿನಲ್ಲಿ ಕನ್ನಡ ಅಸ್ಮಿತೆ ಯುವಶಕ್ತಿ ಮತ್ತು ಭವಿಷ್ಯ’ ವಿಚಾರ ಸಂಕಿರಣವನ್ನು ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಗಡಿನಾಡು ಕಾಸರಗೋಡಿನ ಬಹುಭಾಷಾ ಅಸ್ತಿತ್ವ ಇಲ್ಲಿನ ಕನ್ನಡದ ಅಸ್ಮಿತೆಗೆ ಮೆರುಗು ತಂದುಕೊಟ್ಟಿದೆ. ಬಹುಭಾಷಾ ಸಂಗಮ ಭೂಮಿಯಾಗಿರುವ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕಾಗಿದೆ. ಗಡಿನಾಡಿನಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಅಸ್ಮಿತೆ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇರಳ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಹಯೋಗದಲ್ಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಕಾಸರಗೋಡಿನಲ್ಲಿ ಕನ್ನಡ ಅಸ್ಮಿತೆ ಯುವಶಕ್ತಿ ಮತ್ತು ಭವಿಷ್ಯ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗ ಮತ್ತು ಗಿಳಿವಿಂಡು ಕನ್ನಡ ಸಾಹಿತ್ಯಕ ಮತ್ತು ಸಾಂಸ್ಕೃತಿಕ ವೇದಿಕೆಯ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ.ಮಹಮ್ಮದಾಲಿ ಅತಿಥಿಗಳಾಗಿದ್ದರು.
ಸಾಹಿತಿ ಡಾ.ರಮಾನಂದ ಬನಾರಿ ಸಾರಥ್ಯದಲ್ಲಿ ಪ್ರಕಟಗೊಳ್ಳುತ್ತಿರುವ ‘ಕನ್ನಡಿಯಲ್ಲಿ ಕನ್ನಡಿಗ’ ಕೃತಿ ಸರಣಿಯ ಆರನೇ ಸಂಚಿಕೆಯನ್ನು ಸಾಹಿತಿ, ನಿವೃತ್ತ ಪ್ರಾಧ್ಯಾಪಕಿ ಡಾ.ಪ್ರಮೀಳಾ ಮಾಧವ್ ಬಿಡುಗಡೆಗೊಳಿಸಿದರು.
ಡಾ.ಕಿಶೋರ್ ಕುಮಾರ್ ರೈ ಶೇಣಿ ಸ್ವಾಗತಿಸಿದರು. ಉಪನ್ಯಾಸಕ ಪಿ.ಶಿವಶಂಕರ್ ನಿರೂಪಿಸಿದರು. ವಿಶಾಲಾಕ್ಷ ಪುತ್ರಕಳ ವಂದಿಸಿದರು. ಮಾಸ್ಟರ್ ಕೋಚಿಂಗ್ ಸೆಂಟರ್ ವತಿಯಿಂದ ಆಯೋಜಿಸಲಾದ ಪುಸ್ತಕ ಪ್ರದರ್ಶನವನ್ನು ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ಪ್ರಮುಖರಾದ ಡಾ.ಸದಾನಂದ ಪೆರ್ಲ, ರಾಧಾಕೃಷ್ಣ ಬೆಳ್ಳೂರು, ಡಾ.ಬಾಲಕೃಷ್ಣ ಹೊಸಂಗಡಿ, ಡಾ.ಶ್ರೀಧರ್ ಎನ್., ವಿದ್ಯಾರ್ಥಿಗಳಾದ ದೀಕ್ಷಿತಾ, ಅನಿರುದ್ಧ ಅವರು ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಿದರು.
ಸಾಂಸ್ಕೃತಿಕ ವಲಯದ ಕನ್ನಡ ಅಸ್ಮಿತೆಯ ಕುರಿತು ಸಂವಾದ ನಡೆಯಿತು. ಸಂಜೆ ಸಮಾರೋಪ ಸಮಾರಂಭದಲ್ಲಿ ವಿಮರ್ಶಕ ಡಾ.ಎಸ್.ಆರ್.ವಿಜಯಶಂಕರ್ ಸಮಾರೋಪ ಭಾಷಣ ಮಾಡಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ.ಪಿ.ಎನ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.
ವಿಲೀನ ಅಸಾಧ್ಯ
ಕಾಸರಗೋಡು ಕರ್ನಾಟಕದೊಂದಿಗೆ ವಿಲೀನ ಮಾಡಬೇಕೆಂಬ ಹೋರಾಟಕ್ಕೆ ಏಳು ದಶಕಗಳ ಇತಿಹಾಸವಿದ್ದು, ಇಲ್ಲಿ ಸಾಂಸ್ಕೃತಿಕ, ಭಾಷಾ ಕ್ರಾಂತಿ ಹೊರತಾಗಿ ವಿಲೀನ ಪ್ರಕ್ರಿಯೆ ಅಸಾಧ್ಯದ ಮಾತು ಎಂದು ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. 1956ರಲ್ಲಿ ಭಾಷಾವಾರು ಪ್ರಾಂತ ರಚನೆ ವೇಳೆ ಆದ ದೊಡ್ಡ ಪ್ರಮಾದದಿಂದ ಅಚ್ಚಕನ್ನಡದ ಗಡಿನಾಡಿನ ಕನ್ನಡಿಗರು ಸಂಕಷ್ಟ ಅನುಭವಿಸುವಂತಾಗಿದೆ. ಶೇ.99 ಕನ್ನಡಿಗರಿದ್ದರೂ ಕಾಸರಗೋಡನ್ನು ಕೇರಳಕ್ಕೆ ಸೇರ್ಪಡೆಗೊಳಿಸಿರುವುದು ಯಕ್ಷಪ್ರಶ್ನೆಯಾಗಿ ಉಳಿದುಕೊಂಡಿದೆ ಎಂದರು.