ರೋಬೋ ರೇಸ್ ಮತ್ತು ಮೈಂಡ್ ರಶ್ ತಾಂತ್ರಿಕ ಸ್ಪರ್ಧೆ ಉದ್ಘಾಟಿಸಿ ಸಹಾಯಕ ಶಿಕ್ಷಕ ಧರಣೇಂದ್ರ ಕೆ. ಮಾತನಾಡಿದರು. ಡಾ.ಸಂದೀಪ್, ಸಂತೋಷ್ , ಚಂದ್ರನಾಥ್ ಜೈನ್, ಮೇರಿ ಸ್ಮಿತಾ, ದಿನೇಶ್ ಮತ್ತಿತರರು ಇದ್ದರು. 
ದಕ್ಷಿಣ ಕನ್ನಡ

ಕಲಿಕೆಗೆ ಬಳಕೆಯಾಗಲಿ ಆಧುನಿಕ ತಂತ್ರಜ್ಞಾನ

ಎಸ್‌ಡಿಎಂ ಪಾಲಿಟೆಕ್ನಿಕ್‌ನಲ್ಲಿ ರೋಬೋ ರೇಸ್ ಸ್ಪರ್ಧೆ

ವಿಜಯವಾಣಿ ಬೆಳ್ತಂಗಡಿ ಸುದ್ದಿ

ವಿದ್ಯಾರ್ಥಿಗಳು ತಾಂತ್ರಿಕ ಕೌಶಲಗಳೊಂದಿಗೆ ಕೃತಕ ಬುದ್ಧಿಮತ್ತೆಯನ್ನು ಕಲಿಕೆಯ ಸದುಪಯೋಗಕ್ಕಾಗಿ ಬಳಸಿಕೊಳ್ಳಬೇಕು. ಪ್ರಶ್ನಿಸುವ ಮನೋಭಾವವಿದ್ದಾಗ ಬೆಳೆಯಲು ಸಾಧ್ಯ. ಜೀವನದಲ್ಲಿ ಸಾಧನೆ ಮಾಡುವುದರ ಜತೆಗೆ ಮೊದಲು ಉತ್ತಮ ಮಾನವರಾಗಬೇಕು ಎಂದು ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಹಾಯಕ ಶಿಕ್ಷಕ ಧರಣೇಂದ್ರ ಕೆ. ಹೇಳಿದರು.

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರೋಬೋ ರೇಸ್ ಮತ್ತು ಮೈಂಡ್ ರಶ್ ಎಂಬ ತಾಂತ್ರಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಸಂದೀಪ್ ಮಾತನಾಡಿ, ಇಂತಹ ನವೀನ ತಾಂತ್ರಿಕ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಲು ಸಹಕಾರಿಯಾಗುತ್ತವೆ. ಮುಂದಿನ ದಿನಗಳಲ್ಲಿ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು ಮತ್ತು ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜುಗಳು ಸಹಭಾಗಿತ್ವದಲ್ಲಿ ಇಂತಹ ಶೈಕ್ಷಣಿಕ ಚಟುವಟಿಕೆಗಳನ್ನು ದೊಡ್ಡಮಟ್ಟದಲ್ಲಿ ಆಯೋಜಿಸಬಹುದು ಎಂದರು.

ವಿದ್ಯಾರ್ಥಿಗಳು ತಯಾರಿಸಿದ ಲೈನ್ ಫಾಲೋಯಿಂಗ್ ರೋಬಾಟ್ ನಿಗದಿತ ಮಾರ್ಗದಲ್ಲಿ ಚಲಿಸುವ ಮೂಲಕ ರೋಬೊ ರೇಸ್ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಮೈಂಡ್ ರಶ್ ಸ್ಪರ್ಧೆಗಾಗಿ ಎಚ್‌ಟಿಎಂಎಲ್, ಸಿಎಸ್‌ಎಸ್ ಮತ್ತು ಜಾವಾ ಸ್ಕಿಫ್ಟ್ ತಂತ್ರಜ್ಞಾನಗಳನ್ನು ಬಳಸಿ ಅಭಿವೃದ್ಧಿಪಡಿಸಿದ ವೆಬ್‌ಸೈಟ್ ಅನ್ನು ಕೌಂಟ್‌ಡೌನ್ ಮತ್ತು ಅನಿಮೇಷನ್‌ಗಳ ಮೂಲಕ ಪರಿಚಯಿಸಲಾಯಿತು.

ಪ್ರಾಂಶುಪಾಲ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ್ ಜೈನ್, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಮೇರಿ ಸ್ಮಿತಾ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ದಿನೇಶ್ ಉಪಸ್ಥಿತರಿದ್ದರು.

ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ವರ್ಷಾ ಕೆ.ಪಿ. ಕಾರ್ಯಕ್ರಮ ನಿರೂಪಿಸಿದರು. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ವೈಶಾಖ್ ಕೆ.ಎಸ್. ಅತಿಥಿಗಳನ್ನು ಪರಿಚಯಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಶ್ರುತಿ ವಂದಿಸಿದರು.

ಸ್ಪರ್ಧೆಗಳ ವಿಜೇತರು

ರೋಬೋ ರೇಸ್ ಸ್ಪರ್ಧೆಯಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಹರಿಪ್ರಸಾದ್ ಮತ್ತು ತಂಡ ಪ್ರಥಮ ಸ್ಥಾನ ಪಡೆದರೆ, ವಿಘ್ನೇಶ್ ಎಲ್. ಮತ್ತು ತಂಡ ದ್ವಿತೀಯ ಸ್ಥಾನ ಹಾಗೂ ಸಾರ್ಥಕ್ ಎಚ್.ಗುಡಿಗಾರ್ ಮತ್ತು ತಂಡ ತೃತೀಯ ಸ್ಥಾನ ಗಳಿಸಿತು. ವೈರ್‌ಲೆಸ್ ರೋಬಾಟ್ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಶೆಲ್ಟನ್ ಮ್ಯಾಥ್ಯೂ ಮತ್ತು ತಂಡ ಹಾಗೂ ರೂಪೇಶ್ ಮತ್ತು ತಂಡ ವಿಶೇಷ ಮನ್ನಣೆ ಪಡೆದರು. ಮೈಂಡ್ ರಶ್ ತಾಂತ್ರಿಕ ಸ್ಪರ್ಧೆಯ ಪ್ರಾಂಪ್ಟ್ ಬಡ್ಡಿ ವಿಭಾಗದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಪೂಜಿತ್ ಮತ್ತು ಜೆ.ಆದರ್ಶ್ ಪ್ರಥಮ ಸ್ಥಾನ ಪಡೆದರೆ, ಕಂಪ್ಯೂಟರ್ ಸೈನ್ಸ್ ವಿಭಾಗದ ನಿಶ್ಮಿತಾ ಮತ್ತು ಯಶ್ವಿತಾ ದ್ವಿತೀಯ ಸ್ಥಾನ ಗಳಿಸಿದರು. ಲಾಜಿಕ್ ರಶ್ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಸನ್ನ ಪ್ರಥಮ ಸ್ಥಾನ ಹಾಗೂ ಪ್ರಶಾಂತ್ ದ್ವಿತೀಯ ಸ್ಥಾನ ಪಡೆದರು.