ಸುಬ್ರಹ್ಮಣ್ಯ: ದೈವ- ದೇವರ ಸೇವೆಯು ಬದುಕಿಗೆ ಸುಖ, ಶಾಂತಿಯನ್ನು ನೀಡುತ್ತದೆ. ಅನಾದಿಕಾಲದಿಂದ ನಡೆಸಿಕೊಂಡು ಬಂದ ರೂಢಿಸಂಪ್ರದಾಯ ಹಾಗೂ ಆಚರಣೆಗಳನ್ನು ಯುವ ಜನಾಂಗ ಮುಂದುವರಿಸಿಕೊಂಡು ಹೋಗುವುದು ಅತ್ಯವಶ್ಯಕ. ಅದಮ್ಯ ಭಕ್ತಿಯಿಂದ ದೈವ-ದೇವರ ಆರಾಧನೆಯು ಬದುಕಿನ ಔನ್ನತ್ಯಕ್ಕೆ ಅಡಿಗಲ್ಲಾಗುತ್ತದೆ. ಭಕ್ತಿ ಮತ್ತು ಆರಾಧನೆ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹೇಳಿದರು.
ಸುಬ್ರಹ್ಮಣ್ಯದ ದೇವರಗದ್ದೆಯ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದ ಮುಂಭಾಗದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುದಾನದಲ್ಲಿ ನಿರ್ಮಿಸಲಾದ ಹೊರಾಂಗಣ ಛಾವಣಿ ಹಾಗೂ ನಾಗಬ್ರಹ್ಮ ಸಭಾಭವನವನ್ನು ಶನಿವಾರ ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಸೌಮ್ಯಾ ಭರತ್, ದೇವಳದ ಇಂಜಿನಿಯರ್ ಉದಯ ಕುಮಾರ್ ಕೆ.ಸಿ., ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ, ಮಾಸ್ಟರ್ ಪ್ಲಾೃನ್ ಸಮಿತಿ ಸದಸ್ಯರಾದ ಪವನ್ ಎಂ.ಡಿ., ಸತೀಶ್ ಕೂಜುಗೋಡು, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮಾಧವ ಡಿ.ದೇವರಗದ್ದೆ, ಗುತ್ತಿಗೆದಾರ ಅವಿನಾಶ್ ಪಳ್ಳಿಗದ್ದೆ, ಸಹಗುತ್ತಿಗೆದಾರ ಅಭಿಲಾಶ್ ಪಳ್ಳಿಗದ್ದೆ ಅತಿಥಿಗಳಾಗಿದ್ದರು.
ಪ್ರಮುಖರಾದ ಆನಂದ ಕಲ್ಲಜಡ್ಕ, ಬಾಬು ಎಂ.ಮೊಗ್ರ, ಅಣ್ಣು ದೇವರಗದ್ದೆ, ಶಿವರಾಮ, ದೈವಸ್ಥಾನದ ಅಭಿವೃದ್ಧಿ ಸಮಿತಿಯ ದಿನೇಶ್ ಎಂ.ಆರ್., ತಾರನಾಥ್ ಕೋನಡ್ಕ, ಗಣೇಶ್ ಭಟ್ ದೇವರಗದ್ದೆ, ಭರತ್, ನಾರಾಯಣ ಮಾನಾಡು, ಮಂಜುನಾಥ್ ಆಚಾರ್ಯ, ಹಿರಿಯರಾದ ರಾಮಯ್ಯ ಶೆಟ್ಟಿ ಉಪಸ್ಥಿತರಿದ್ದರು. ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.