ಬೆಳ್ತಂಗಡಿ: ಕನ್ಯಾಡಿ ಗ್ರಾಮದ ಕಯ್ಯಂಗು ಎಂಬಲ್ಲಿ ಚಿರತೆಯೊಂದು ಭಾನುವಾರ ತಡರಾತ್ರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಕಳೆದ ಹಲವಾರು ದಿನಗಳಿಂದ ಇಲ್ಲಿನ ಪರಿಸರದಲ್ಲಿ ಚಿರತೆ ತಿರುಗಾಟ ವಿಪರೀತವಾಗಿದ್ದು, ಆಗಾಗ ಜನರ ಕಣ್ಣಿಗೂ ಬೀಳುತ್ತಿತ್ತು. ಜ.16ರಂದು ಕನ್ಯಾಡಿ ಗ್ರಾಮದ ಅಂಡಿರ್ ಮಾರ್ ನಿವಾಸಿ ಮಂಜಪ್ಪ ನಾಯ್ಕ(62) ಎಂಬುವರು ಅಂಗಳದಲ್ಲಿ ನಿಂತಿದ್ದ ವೇಳೆ ಚಿರತೆ ದಾಳಿ ಮಾಡಿದ ಘಟನೆ ನಡೆದಿತ್ತು. ಕಯ್ಯಂಗು ಪರಿಸರದಲ್ಲಿ ಆಗಾಗ ಚಿರತೆ ಕಂಡು ಬರುತ್ತಿತ್ತು. ಭಾನುವಾರ ಮುಂಜಾನೆ ಕನ್ಯಾಡಿ ಗ್ರಾಮದಲ್ಲಿ ಸ್ಥಳೀಯ ಹಾಲು ಉತ್ಪಾದಕರ ಸಂದ ಹಾಲು ಸಂಗ್ರಹ ವಾಹನಕ್ಕೆ ಚಿರತೆ ಎದುರಾಗಿದ್ದು, ಇಲ್ಲಿನ ಜನರಲ್ಲಿ ಭೀತಿಯ ವಾತಾವರಣ ಏರ್ಪಟ್ಟಿದೆ.
ಅರಣ್ಯ ಇಲಾಖೆ ಕಳೆದ ಕೆಲವು ದಿನಗಳ ಹಿಂದೆ ಚಿರತೆಯ ಚಲನವಲನಗಳ ಆಧಾರದಲ್ಲಿ ಕಯ್ಯಂಗು ಸಮೀಪ ಬೋನು ಇರಿಸಿದ್ದು, ಭಾನುವಾರ ತಡರಾತ್ರಿ ಸೆರೆಯಾಗಿದೆ.