ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಮಾಲಾಡಿ ಪರಿಸರದಲ್ಲಿ ಚಿರತೆ ಪತ್ತೆ

ಸೌಮ್ಯ ಆರ್
ಬೆಳ್ತಂಗಡಿ: ಮಡಂತ್ಯಾರು ಮಾಲಾಡಿ ಗ್ರಾಮದ ಅಂತರ, ನವುಂಡ ದೇವಸ್ಥಾನ ಸಮೀಪ ಮಂಗಳವಾರ ರಾತ್ರಿ ಎರಡು ಚಿರತೆಗಳು ರಸ್ತೆ ಬದಿ ಕಂಡುಬಂದಿದ್ದು, ನಾಯಿಯೊಂದರ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.
ಸ್ಥಳೀಯರೋರ್ವರು ಬೈಕ್‌ನಲ್ಲಿ ರಾತ್ರಿ ಹೋಗುತ್ತಿರುವಾಗ ರಸ್ತೆ ಬದಿ ಎರಡು ಚಿರತೆಗಳು ಇರುವುದು ಕಂಡುಬಂದಿವೆ. ದೊಡ್ಡ ಚಿರತೆ ಮತ್ತೊಂದು ಮರಿ ಚಿರತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚಿರತೆಗಳು ನಾಯಿನೊಂದರ ಮೇಲೆ ದಾಳಿ ನಡೆಸಿದ್ದು, ನಾಯಿ ರಸ್ತೆಯಲ್ಲೇ ಸತ್ತು ಬಿದ್ದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಇಲಾಖಾಧಿಕಾರಿಗಳು ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಸೆರೆ ಹಿಡಿಯಲು ಬೋನು ಇಡುವುದಾಗಿ ಭರವಸೆ ನೀಡಿದ್ದಾರೆ.
ಮಾಲಾಡಿ ಪರಿಸರದಲ್ಲಿ ಚಿರತೆ ಇರುವ ಸುದ್ದಿ ತಿಳಿದು ನಾಗರಕರಿಗೆ ಭಯ ಭೀತರಾಗಿದ್ದಾರೆ. ಮಾಲಾಡಿ ಗ್ರಾಮದ ನವುಂಡ, ಅಂತರ ಪರಿಸರದ ನಾಗರಿಕರು, ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳು ಜಾಗೃತಿ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಉಜಿರೆ ಸಮೀಪದ ಇಚ್ಚಿಲ ಎಂಬಲ್ಲಿ ಕೂಡ ಚಿರತೆ ಕಂಡುಬಂದಿದೆ.