ಗುರುಪುರ: ಎಡಪದವು ಗ್ರಾಪಂ ವ್ಯಾಪ್ತಿಯ ಕೋರ್ಡೆಲ್ ಪಲ್ಕೆ ಎಂಬಲ್ಲಿ ಬುಧವಾರ ರಾತ್ರಿ ಚಿರತೆಯೊಂದು ಕಾಣಿಸಿಕೊಂಡಿದೆ.
ಕೋರ್ಡೆಲ್ ನಿವಾಸಿ ಅರ್ಜುನ್ ಭಟ್ ಎಂಬುವರ ಮನೆ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ರಾತ್ರಿ 7.30ರ ಸುಮಾರಿಗೆ ಮನೆಯ ಹತ್ತಿರ ಶಬ್ದ ಕೇಳಿ ಬಂತು. ಟಾರ್ಚ್ ಬೆಳಕು ಹಾಕಿ ನೋಡಿದಾಗ ರಸ್ತೆ ಬದಿಯ ಪೊದೆಯಲ್ಲಿ ಚಿರತೆ ಇರುವುದು ಕಂಡುಬಂದಿದೆ. ಹೆಚ್ಚು ಜನ ಸಂಚಾರದ ರಸ್ತೆ ಇದಾಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಇಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ ಎಂದು ಅರ್ಜುನ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಇಲ್ಲಿನ ಅಂಗನವಾಡಿ ಬಳಿ ಕಂಡುಬಂದಿದ್ದ ಚಿರತೆ ಮನೆಯಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಕೊಂಡೊಯ್ಯಲು ಪ್ರಯತ್ನಿಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆ ಹಿಡಿಯಲು ಬೋನು ಇಡುವುದಾಗಿ ಹೇಳಿದ್ದಾರೆ.