ಉದ್ಘಾಟನೆಗೆ ಸಿದ್ಧಗೊಂಡಿರುವ ಎಲ್‌ಡಿಸಿ ಚೆಕ್‌ಪೋಸ್ಟ್‌ನ ಸ್ಯಾಟಲೈಟ್ ಕಂಟೈನರ್ ಕಚೇರಿ
ಇತರ ರಾಜ್ಯಗಳಿಂದ ಕೇರಳಕ್ಕೆ ವಾಹನಗಳ ಮೂಲಕ ಸಾಗಿಸುವ ಕೋಳಿ, ಜಾನುವಾರುಗಳ ತಪಾಸಣೆ ನಡೆಸುವ ನಿಟ್ಟಿನಲ್ಲಿ ಪೆರ್ಲದಲ್ಲಿ ಆರಂಭಗೊಂಡಿರುವ ಜಾನುವಾರು ರೋಗ ನಿಯಂತ್ರಣ(ಎಲ್‌ಡಿಸಿ) ಚೆಕ್‌ಪೋಸ್ಟ್‌ಗೆ ಇಪ್ಪತ್ತು ವರ್ಷಗಳ ನಂತರ ಸ್ಯಾಟಲೈಟ್ ಕಂಟೈನರ್ ಕಚೇರಿ ಲಭ್ಯವಾಗಿದೆ. ಪೆರ್ಲ ಆರ್‌ಟಿಒ ಚೆಕ್‌ಪೋಸ್ಟ್ ಸಮೀಪ ಖಾಸಗಿ ವ್ಯಕ್ತಿಯೊಬ್ಬರ ಸಣ್ಣ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಎಲ್‌ಡಿಸಿ ಚೆಕ್‌ಪೋಸ್ಟ್‌ಗೆ ಕೊನೆಗೂ ಸ್ವಂತ ಕಚೇರಿ ಲಭ್ಯವಾಗಿದೆ. ಆದರೆ ಇಲ್ಲೂ ಸ್ಥಳಾವಕಾಶದ ಕೊರತೆ ಕಾಡುತ್ತಿದೆ.
ರಾಜ್ಯ ಪಶು ಸಂಗೋಪನೆ ಮತ್ತು ಕ್ಷೀರಾಭಿವೃದ್ಧಿ ಇಲಾಖೆ ಅಧೀನದಲ್ಲಿ ಕಾರ್ಯಾಚರಿಸುವ ಎಲ್‌ಡಿಸಿ ಚೆಕ್‌ಪೋಸ್ಟ್‌ನಲ್ಲಿ ಹೊರ ರಾಜ್ಯಗಳಿಂದ ವಾಹನಗಳಲ್ಲಿ ತರಲಾಗುವ ಕೋಳಿ, ಜಾನುವಾರುಗಳನ್ನು ತಪಾಸಣೆ ನಡೆಸಿ, ಅವುಗಳಿಗೆ ರೋಗಬಾಧೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ರಾಜ್ಯ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ.
ಜಿಲ್ಲೆಯಲ್ಲಿ ತಲಪ್ಪಾಡಿ, ಚೆರ್ವತ್ತೂರು ಹಾಗೂ ಪೆರ್ಲದಲ್ಲಿ ಮಾತ್ರ ಎಲ್‌ಡಿಸಿ ಚೆಕ್‌ಪೋಸ್ಟ್ ಕಾರ್ಯಾಚರಿಸುತ್ತಿದೆ. ಕೋಳಿ, ಜಾನುವಾರುಗಳನ್ನು ಸಮಗ್ರ ತಪಾಸಣೆಗೊಳಪಡಿಸಿದ ನಂತರವೇ ರಾಜ್ಯದೊಳಗೆ ಬಿಡಬೇಕೆಂಬ ನಿಬಂಧನೆಯಿದ್ದರೂ, ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಪ್ರಸಕ್ತ ಐವರು ಲೈವ್‌ಸ್ಟಾಕ್ ಇನ್‌ಸ್ಪೆಪೆಕ್ಟರ್ ಹಾಗೂ ಒಬ್ಬ ಅಟೆಂಡರ್ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟ್ಯಾಗ್ ಅಳವಡಿಕೆ
ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದ ನಂತರ ಕಸಾಯಿಖಾನೆಗಳಿಗೆ ಹೋಗುವ ಜಾನುವಾರುಗಳ ಕಿವಿಗೆ ಕೆಂಪು ಹಾಗೂ ಸಾಕಣೆಗಾಗಿ ಸಾಗಿಸುವ ಜಾನುವಾರುಗಳಿಗೆ ಹಳದಿ ಟ್ಯಾಗ್ ಅಳವಡಿಸಲಾಗುತ್ತದೆ. ರೋಗ ಪತ್ತೆಯಾದಲ್ಲಿ ಅಂಥ ಜಾನುವಾರುಗನ್ನು ಚೆಕ್‌ಪೋಸ್ಟ್‌ನಲ್ಲೇ ತಡೆದು ರಕ್ತದ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಇನ್ನು ಇತರ ರಾಜ್ಯಗಳಿಂದ ತರಲಾಗುವ ಹಾಲನ್ನು ಸೂಕ್ತ ಶೀಥಲೀಕೃತ ವ್ಯವಸ್ಥೆಯಲ್ಲಿ ಸಾಗಿಸಲಾಗುತ್ತಿರುವ ಬಗ್ಗೆಯೂ ಖಚಿತಪಡಿಸುವುದರ ಜತೆಗೆ ಹಾಲಿನ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತದೆ.
ಸಿಬ್ಬಂದಿಗೆ ಭದ್ರತೆ ಕೊರತೆ
ಎಲ್‌ಡಿಸಿ ಚೆಕ್‌ಪೋಸ್ಟ್ ದಿನದ 24 ತಾಸು ಚಟುವಟಿಕೆ ನಡೆಸುತ್ತಿರುವುದರಿಂದ ರಾತ್ರಿ ವೇಳೆ ಸಿಬ್ಬಂದಿ ಭಯದ ವಾತಾವರಣದಲ್ಲೇ ಕರ್ತವ್ಯ ನಿರ್ವಹಿಸಬೇಕಾಗಿದೆ. ಇಲ್ಲಿ ವಾಹನ ತಡೆದು ನಿಲ್ಲಿಸಲು ಗೇಟಿನ ವ್ಯವಸ್ಥೆಯೂ ಇಲ್ಲ. ಕೆಲವೊಂದು ವಾಹನಗಳಿಗೆ ಸೂಚನೆ ನೀಡಿದರೂ, ಅತಿ ವೇಗವಾಗಿ ಬರುವಾಗ ಗುರುತು ಪತ್ತೆಯೂ ಸಾಧ್ಯವಾಗುತ್ತಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದರೂ, ಸಕಾಲಕ್ಕೆ ಸ್ಪಂದನೆ ಸಿಗುವುದಿಲ್ಲ. ಇದರಿಂದ ಸ್ಥಳದಲ್ಲಿ ರಾತ್ರಿ ವೇಳೆ ಪೊಲೀಸ್ ಪ್ಯಾಟ್ರೋಲಿಂಗ್ ವ್ಯವಸ್ಥೆ ಮಾಡಬೇಕೆಂದು ಸಿಬ್ಬಂದಿ ಆಗ್ರಹಿಸಿದ್ದಾರೆ.
ಚೆಕ್‌ಪೋಸ್ಟ್ ಆರಂಭಗೊಂಡ ದೀರ್ಘ ಕಾಲದ ನಂತರ ಸ್ಯಾಟಲೈಟ್ ಕಂಟೈನರ್ ಕಚೇರಿ ಲಭ್ಯವಾಗಿದೆ. ಕಚೇರಿಯಲ್ಲಿ ಸ್ಥಳಾವಕಾಶದ ಕೊರತೆಯಿದೆ. ಸಮೀಪದಲ್ಲೇ ಸಿಬ್ಬಂದಿಗೆ ವಸತಿ ವ್ಯವಸ್ಥೆಯಾದರೆ 24ಗಂಟೆಯೂ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ. ಆರ್‌ಟಿಒ ಚೆಕ್‌ಪೋಸ್ಟ್ ಗೇಟ್ ಇರುವುದರಿಂದ ಎಲ್‌ಡಿಸಿ ಚೆಕ್‌ಪೋಸ್ಟ್ ಮತ್ತಷ್ಟು ಕಾರ್ಯಕ್ಷಮತೆಯೊಂದಿಗೆ ಚಟುವಟಿಕೆ ನಡೆಸಲು ಸಾಧ್ಯವಾಗಲಿದೆ.