ಕೋಳಿ ಸಾಕಾಣಿಕೆಗೆ ಗ್ರಾಮ ಪಂಚಾಯಿತಿಯಿಂದ ಲೈಸೆನ್ಸ್ ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಭೂ ಪರಿವರ್ತನೆ ಕಡ್ಡಾಯ ಎನ್ನುವ ಹೊಸ ನಿಯಮ ಕೋಳಿ ಸಾಕಾಣೆದಾರರಿಗೆ ಸಮಸ್ಯೆ ತಂದೊಡ್ಡಿದೆ.
ಸರ್ಕಾರ ಕೋಳಿ ಸಾಕಾಣೆಯನ್ನು 1961ರ ಭೂ ಸುಧಾರಣಾ ಕಾಯ್ದೆಯಲ್ಲಿ ಕೃಷಿ ಎಂದು ಪರಿಗಣಿಸಿದೆ. ಆದ್ದರಿಂದ ಭೂ ಪರಿವರ್ತನೆ ಅಗತ್ಯ ಇಲ್ಲ ಎನ್ನುವ ಕಾನೂನು ಇದೆ. ಆದರೆ ಜಿಲ್ಲೆಯ ಕೆಲವು ಪಿಡಿಒಗಳು ಲೈಸೆನ್ಸ್ ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದಾಗಿ ಬ್ಯಾಂಕ್ ಲೋನ್ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಕೋಳಿ ಸಾಕಾಣೆದಾರರು ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 3 ಸಾವಿರ ಮಂದಿ ಕೋಳಿ ಸಾಕಣೆ ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ. 4900 ಕೋಳಿ ಸಾಕಣೆ ಮಾಡಲು ಪರಿಸರ ಇಲಾಖೆ ಅನುಮತಿ ಅಗತ್ಯ ಇರುವುದಿಲ್ಲ. ಆದರೆ ಗ್ರಾಮ ಪಂಚಾಯಿತಿ ಇದನ್ನು ಕಡ್ಡಾಯ ಮಾಡಿರುವುದರಿಂದ ಸ್ವಂತ ಉದ್ಯೋಗ ಮಾಡಿ ಬದುಕುತ್ತಿರುವ ಸಾಕಾಣೆದಾರರಿಗೆ ಸಮಸ್ಯೆ ಉಂಟಾಗಿದೆ.
ಕಂಪೆನಿಗಳು ಸಾಕಾಣೆದಾರರಿಗೆ ಪ್ರತಿ ಕೆ.ಜಿ.ಗೆ 10 ರೂ. ನೀಡಲು ಸರ್ಕಾರ ನಿಗದಿ ಮಾಡಿದ್ದು, ಕಂಪೆನಿಗಳು ನಿಗದಿಪಡಿಸಿದ ದರ ನೀಡುತ್ತಿಲ್ಲ. ಕೋಳಿ ಫಾರಂ ನಿರ್ಮಾಣಕ್ಕೆ ಸಹಕಾರಿ ಸಂಘಗಳು ಕೃಷಿ ಚಟುವಟಿಕೆಗಳಿಗೆ ನೀಡುವ ಬಡ್ಡಿ ದರದಲ್ಲಿ ಸಾಲ ಒದಗಿಸಬೇಕು. ಕಂಪೆನಿಗಳು ಕೋಳಿ ಕೊಂಡೊಯ್ಯುವ ಸಂದರ್ಭ ಕೋಳಿ ಹಿಡಿಯುವ ಕೂಲಿಯಾಳುಗಳ ಕೂಲಿಯನ್ನು ಕಂಪೆನಿ ಭರಿಸಬೇಕು.
ಕಂಪೆನಿಗಳು ಕೋಳಿ ಕೊಂಡೊಯ್ದ 10 ದಿನಗಳಲ್ಲಿ ಸಾಕಣೆದಾರರಿಗೆ ಹಣ ಪಾವತಿಸಬೇಕು. ಕಂಪೆನಿಗಳು ಕೆಲವೊಮ್ಮೆ 45 ದಿನ ಕಳೆದರೂ ಕೊಂಡೊಯ್ಯುವ ಕೆಲಸ ಮಾಡದೇ ಇದ್ದಾಗ ಕೋಳಿಗಳು ಸಾವನ್ನಪ್ಪುವುದು ಹೆಚ್ಚು. ಇದರ ಖರ್ಚು ವೆಚ್ಚಗಳನ್ನು ಸಾಕಣೆದಾರರ ಮೇಲೆ ಹಾಕುವುದರಿಂದ ತೊಂದರೆಯಾಗಿದೆ. ಇದಕ್ಕಾಗಿ 35 ದಿನಗಳ ನಂತರ ಸತ್ತ ಕೋಳಿಗಳ ಮೇಲೆ ಶೇ.50ರಷ್ಟು ಹಣ ಸಾಕಣೆದಾರರಿಗೆ ನೀಡಬೇಕು. ತೆಂಗಿನ ನಾರು ಮತ್ತು ಇತರ ಸಾಮಗ್ರಿಗಳ ಬೆಲೆ ಏರಿಕೆಯಾಗಿದ್ದು ವಿದ್ಯುತ್ ದರ ಏರಿಕೆ ಆಗಿರುವುದರಿಂದ ಸಾಕಣೆದಾರರಿಗೆ ಕೋಳಿಗೆ ನೀಡುವ ದರ ಹೆಚ್ಚಿಸಬೇಕು. ಕೋಳಿ ಸಾಕಾಣೆದಾರರ ಹಿತದೃಷ್ಟಿಯಿಂದ ಮಂಡಳಿ ರಚನೆ ಮಾಡಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎನ್ನುವ ಬೇಡಿಕೆಗಳನ್ನು ಸಾಕಾಣೆದಾರರ ಹಿತರಕ್ಷಣಾ ಸಮಿತಿ ಸರ್ಕಾರದ ಮುಂದಿಟ್ಟಿದೆ.
ಕೋಳಿ ಸಾಕಾಣಿಕೆಗೆ ಸರ್ಕಾರದ ಕಾನೂನು ಪ್ರಕಾರ ಭೂ ಕನ್ವರ್ಷನ್ ಬೇಕಾಗಿಲ್ಲ. ಆದರೆ ಕೆಲವು ಗ್ರಾ.ಪಂ. ಪಿಡಿಒಗಳು ಲೈಸೆನ್ಸ್ ನೀಡದೆ ಇರುವುದರಿಂದ ಸಾಕಾಣೆದಾರರಿಗೆ ತೊಂದರೆಯಾಗುತ್ತಿದೆ. ಜತೆಗೆ ಇತರ ಹಲವು ಬೇಡಿಕೆಗಳನ್ನು ಕೂಡಾ ಸರ್ಕಾರ ಬಗೆ ಹರಿಸಬೇಕು.
ಸಚಿನ್‌ರಾಜ್ ಶೆಟ್ಟಿ
ಸಂಚಾಲಕ, ದ.ಕನ್ನಡ ಕೋಳಿ ಸಾಕಾಣೆದಾರರ ಹಿತರಕ್ಷಣಾ ಸಮಿತಿ
ದಕ್ಷಿಣ ಕನ್ನಡ ಜಿಲ್ಲೆಯ ಕೋಳಿ ಸಾಕಾಣೆದಾರರಿಗೆ ಎದುರಾಗಿರುವ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳೊಂದಿಗೆ ಸಾಕಾಣೆದಾರರ ಸಭೆ ಶೀಘ್ರದಲ್ಲೇ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು.
ಯು.ಟಿ.ಖಾದರ್
ಜಿಲ್ಲಾ ಉಸ್ತುವಾರಿ ಸಚಿವರು