ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ ವಿಸ್ತರಣಾ ಯೋಜನೆಗಳು ಪ್ರಗತಿಯಲ್ಲಿದ್ದು, ಗಣನೀಯ ಹಣಕಾಸು ಹಂಚಿಕೆ ಮತ್ತು ಆಡಳಿತಾತ್ಮಕ ಅನುಮೋದನೆಗಳು ಈಗಾಗಲೇ ಲಭಿಸಿವೆ. ಆದರೆ ಈ ಯೋಜನೆಗಳ ಅನುಷ್ಠಾನಕ್ಕೆ ಭೂಸ್ವಾಧೀನ ಅಡ್ಡಿಯಾಗುತ್ತಿದೆ. 
ದಕ್ಷಿಣ ಕನ್ನಡ

ರೈಲು ಮಾರ್ಗಗಳ ಅನುಷ್ಠಾನಕ್ಕೆ ಭೂಸ್ವಾಧೀನ ಅಡ್ಡಿ

ಮಂಗಳೂರು: ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ ವಿಸ್ತರಣಾ ಯೋಜನೆಗಳು ಪ್ರಗತಿಯಲ್ಲಿದ್ದು, ಗಣನೀಯ ಹಣಕಾಸು ಹಂಚಿಕೆ ಮತ್ತು ಆಡಳಿತಾತ್ಮಕ ಅನುಮೋದನೆಗಳು ಈಗಾಗಲೇ ಲಭಿಸಿವೆ. ಆದರೆ ಈ ಯೋಜನೆಗಳ ಅನುಷ್ಠಾನಕ್ಕೆ ಭೂಸ್ವಾಧೀನ ಅಡ್ಡಿಯಾಗುತ್ತಿದೆ.
ಈಗಾಗಲೇ ಆಡಳಿತಾತ್ಮಕ ಅನುಮೋದನೆಗೊಂಡು ರಾಜ್ಯದಲ್ಲಿ ಅನುಷ್ಟಾನಗೊಳ್ಳಲು ಸಿದ್ದವಾಗಿರುವ ರೈಲ್ವೆ ಯೋಜನೆಗಳಿಗೆ ಒಟ್ಟು 9,064 ಹೆಕ್ಟೇರ್ ಭೂಮಿ ಅಗತ್ಯವಿದೆ. ಇದರಲ್ಲಿ 5,707 ಹೆಕ್ಟೇರ್ ಭೂಮಿ, ಅಂದರೆ ಶೇಕಡಾ 63 ರಷ್ಟು, ಈಗಾಗಲೇ ಸ್ವಾಧೀನಗೊಂಡಿದೆ. ಇನ್ನೂ 3,357 ಹೆಕ್ಟೇರ್ ಭೂಮಿ (ಶೇಕಡಾ 37) ಸ್ವಾಧೀನಗೊಳ್ಳಬೇಕಿರುವುದೇ ಸಮಸ್ಯೆ. ಒಂದು ವೇಳೆ ಈ ಯೋಜನೆಗಳು ಯಾವುದೇ ತೊಡಕಿಲ್ಲದೆ ವೇಗವಾಗಿ ಯಶಸ್ವಿಯಾದರೆ ಲಾಜಿಸ್ಟಿಕ್ಸ್ ವೆಚ್ಚವನ್ನು ಇಳಿಸಿ, ವ್ಯಾಪಾರ, ಕೈಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಕೃಷಿ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಹೊಸ ಮಾರುಕಟ್ಟೆಗಳ ಪ್ರವೇಶವನ್ನು ಸುಲಭಗೊಳಿಸುವ ಮೂಲಕ ಉದ್ಯೋಗಾವಕಾಶಗಳ ಹೆಚ್ಚಳಕ್ಕೂ ಇದು ಸಹಕಾರಿಯಾಗುತ್ತದೆ.

ಎಲ್ಲೆಲ್ಲಿ ಭೂಸ್ವಾಧೀನ ಬಾಕಿ

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆ ಅಗತ್ಯವಿದ್ದು, ಕರ್ನಾಟಕ ಸರ್ಕಾರದಿಂದ ಭೂಸ್ವಾಧೀನ ತಾಂತ್ರಿಕ ಪ್ರಕ್ರೀಯೆಯಲ್ಲೇ ತೊಡಕಾಗಿರುವುದರಿಂದ ಯೋಜನೆ ನಿಗದಿತ ಸಮಯದಲ್ಲಿ ಗುರಿ ತಲುಪಲು ಸಧ್ಯವಾಗುತ್ತಿಲ್ಲ ಎಂಬ ಆರೋಪಗಳಿವೆ. 96 ಕಿ.ಮೀ ಉದ್ದದ ಶಿವಮೊಗ್ಗ- ರಾನ್ನೆಬೆನ್ನೂರು ಹೊಸ ರೈಲು ಮಾರ್ಗಕ್ಕೆ 559 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಅದರಲ್ಲಿ 333 ಹೆಕ್ಟೇರ್ ಇನ್ನೂ ಬಾಕಿಯಿದೆ. ಬೆಳಗಾವಿ- ಧಾರವಾಡ (73 ಕಿ.ಮೀ) ಹೊಸ ಮಾರ್ಗಕ್ಕೆ 581 ಹೆಕ್ಟೇರ್, ಶಿವಮೊಗ್ಗಹರಿಹರ (79 ಕಿ.ಮೀ) ಹೊಸ ಮಾರ್ಗಕ್ಕೆ 488 ಹೆಕ್ಟೇರ್, ವೈಟ್‌ಫೀಲ್ಡ್ ಕೋಲಾರ (53 ಕಿ.ಮೀ) ಹೊಸ ಮಾರ್ಗಕ್ಕೆ 337 ಹೆಕ್ಟೇರ್ ಮತ್ತು ಹಾಸನ- ಬೇಲೂರು (32 ಕಿ.ಮೀ) ಹೊಸ ಮಾರ್ಗಕ್ಕೆ 206 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಈ ಎಲ್ಲಾ ಯೋಜನೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ಸುಬ್ರಹ್ಮಣ್ಯ-ಧರ್ಮಸ್ಥಳ ರೈಲು ಮಾರ್ಗದ ಸರ್ವೆ ಬಾಕಿ

ರಾಜ್ಯದ 9 ರೈಲ್ವೆ ಯೋಜನೆಗಳಿಗೆ ಒಟ್ಟು 5097.87 ಕೋಟಿ ರೂ. ಮೊತ್ತದ ಯೋಜನೆಯಿದೆ. ಇದರಲ್ಲಿ 2662 ಕೋಟಿ ರೂ. ಗಳನ್ನು ಪಾವತಿಸಿದ್ದು, 2435 ಕೋಟಿ ರೂ. ಬಾಕಿ ಇದೆ. ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ಬಾಕಿಯಿದೆ. ಸಕಲೇಶಪುರ-ಬೇಲೂರು-ಚಿಕ್ಕಮಗಳೂರು ಹೊಸ ರೈಲು ಮಾರ್ಗಕ್ಕೆ ಅನುದಾನ ಬಿಡುಗಡೆ ಬಾಕಿ, ಸುಬ್ರಹ್ಮಣ್ಯ-ಧರ್ಮಸ್ಥಳ ರೈಲು ಮಾರ್ಗದ ಸರ್ವೆ ಮತ್ತು ಆರಂಭಿಕ ಕಾಮಗಾರಿಗಳಿಗೆ ಸಿಗದ ಅನುದಾನ, ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ಟೈನ್ ಕಾರಿಡಾರ್‌ಳಿಗೆ ಅಗತ್ಯ ಮೂಲಸೌಕರ್ಯ ಹಾಗೂ ಭೂಮಿ ಒದಗಿಸಲು ಬಾಕಿಯಿದ್ದು. ಈ ಕಾರ್ಯಕ್ಕೆ ರಾಜ್ಯ ಸರ್ಕಾರದ ಕಡೆಯುಂದಲೇ ಹಿನ್ನಡೆಯಾಗುತ್ತಿದೆ.