ಕುಡುಪು ಶ್ರೀ ಅನಂತಪದ್ಮನಾಭ  
ದಕ್ಷಿಣ ಕನ್ನಡ

ಕುಡುಪು ಕ್ಷೇತ್ರ ಸರ್ಪ ವಾಹನ ಯುಕ್ತ ಬಂಡಿ ಉತ್ಸವ

ಮಂಗಳೂರು: ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ನಾಗರಾಧನಾ ಕ್ಷೇತ್ರ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಂಭ್ರಮ ಸಡಗರದ ಷಷ್ಠಿ ಮಹೋತ್ಸವ ನಡೆಯುತ್ತಿದ್ದು, ಉತ್ಸವದ ಮೂರನೇ ದಿನವಾದ ತದಿಗೆ ದಿನದಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಅನಂತಪದ್ಮನಾಭ ದೇವರ ವೈಭವದ ಸರ್ಪವಾಹನ ಯುಕ್ತ ಭಂಡಿ ಉತ್ಸವ ನಡೆಯಿತು.
ಮುಂಜಾನೆ ಶ್ರೀ ಅನಂತ ಪದ್ಮನಾಭ ದೇವರಿಗೆ ಪ್ರಾರ್ಥಕಾಲದ ಪೂಜೆ ಬಳಿಕ ವಿಶೇಷ ಪಂಚಾಮೃತ ಅಭಿಷೇಕ ವಿವಿಧ ಅರ್ಚನೆಗಳು ನಡೆದು, ದೇವರಿಗೆ ವಿಶೇಷ ಹರಿವಾಣ ನೈವೇದ್ಯ ಸಮರ್ಪಣೆಗೊಂಡಿತು. ಬಳಿಕ ಮಹಾಪೂಜೆಯ ಮೊದಲು ಮಹಾ ನೈವೇದ್ಯ ಸಮರ್ಪಣೆಗೊಂಡು ಮಹಾಪೂಜೆ ಜರಗಿ, ನಿತ್ಯ ಬಲಿಯಾಗಿ ಮಹಾ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉಡುಕೆ ಸುತ್ತು ಉತ್ಸವ ಹಾಗೂ ಶ್ರೀ ಅನಂತಪದ್ಮನಾಭ ದೇವರಿಗೆ ವರ್ಷದಲ್ಲಿ ಒಂದು ಬಾರಿ ಮೂರು ಸುತ್ತುಗಳ ವಿಶಿಷ್ಟ ಚೆಂಡೆವಾದನ ಸೇವೆಯ ಬಲಿ ಉತ್ಸವ ಅರ್ಪಣೆಗೊಂಡಿತು.
ಮೂರನೇ ಸುತ್ತಿನ ಚಂಡೆ ವಾದನದ ಬಲಿ ಉತ್ಸವದಲ್ಲಿ ನಾಗಬನದ ಬಳಿಯಿಂದ ಶ್ರೀ ದೇವರಿಗೆ ದರ್ಶನ ಬಲಿಯ ರೂಪದ ವಿಶೇಷ ಸೇವೆ ಅರ್ಪಣೆಗೊಂಡಿತು. ದೇವರು ವಿಶೇಷ ಹೂವಿನ ಅಲಂಕೃತ ಸರ್ಪ ವಾಹನ ಯುಕ್ತ ಬಂಡಿಯಲ್ಲಿ ರಥಾರೂಢರಾಗಿ ದೇವರಿಗೆ ಮಹಾ ಮಂಗಳಾರತಿ ನಡೆಯಿತು. ರಾಜಾ ಅಂಗಳದ ಸುತ್ತ ಮೂರು ಸುತ್ತು ಭಂಡಿ ರಥವನ್ನು ಗೋವಿಂದ ನಾಮಸ್ಮರಣೆಯೊಂದಿಗೆ ಎಳೆಯಲಾಯಿತು. ಬಳಿಕ ದೇವರ ಪಾಲಕಿ ಉತ್ಸವ ನಡೆದು ನೆರೆದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.