ಮಾದಕ ವ್ಯಸನಿಗಳ ಅಕ್ರಮ ಚಟುವಟಿಕೆ ತಾಣವಾಗಿ ಮಾರ್ಪಟ್ಟಿರುವ ಕೊರಗರ ಸಭಾಭವನ. 
ದಕ್ಷಿಣ ಕನ್ನಡ

ಅಕ್ರಮ ಚಟುವಟಿಕೆ ತಾಣ ಕೊರಗರ ಭವನ!

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಬೈಂದೂರು ತಾಲೂಕು ಜಡ್ಕಲ್ ಗ್ರಾಪಂ ವ್ಯಾಪ್ತಿಯ ಮುದೂರು ಗ್ರಾಮದ ಉದಯ ನಗರದಲ್ಲಿರುವ ಕೊರಗರ ಸಭಾಭವನ ಮಾದಕ ವ್ಯಸನಿಗಳ ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.
ಐಟಿಡಿಪಿ ಇಲಾಖೆ ಅನುದಾನದಿಂದ ನಿಮಾಣಗೊಂಡ ಸಭಾಭವನ ಸ್ಥಳಿಯಾಡಳಿತದ ಸೂಕ್ತ ನಿರ್ವಹಣೆಯಿಲ್ಲದೆ ಸೊರಗಿದೆ. ಕೊರಗರಿಗಾಗಿ ನಿರ್ಮಿಸಿದ ಭವನವಾದರೂ ಇದು ಸರ್ಕಾರಿ ಸೊತ್ತು ಎನ್ನುವ ಪರಿಜ್ಞಾನವಿಲ್ಲದೆ ಕೆಲವರು ಭವನಕ್ಕೆ ಬೀಗ ಹಾಕಿ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ರಾತ್ರಿ ವೇಳೆ ಇಲ್ಲಿ ಅನೇಕರು ಅಮಲು ಪದಾರ್ಥ ಸೇವಿಸಿ ಮತ್ತಿನಲ್ಲಿ ತಿರುಗಾಡುತ್ತಿದ್ದು, ಜನಸಾಮಾನ್ಯರು ತಿರುಗಾಡಲು ಭಯಪಡುವ ಪರಿಸ್ಥಿತಿ ನಿಮಾಣವಾಗಿದೆ ಎಂದು ಕೊರಗ ಸಮುದಾಯದ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಭವನದ ನಿರ್ವಹಣೆಯನ್ನು ಸ್ಥಳೀಯ ಗ್ರಾಪಂಗೆ ವಹಿಸುವಂತೆ ಸೂಚಿಸಬೇಕು. ಸಂಬಂಧಪಟ್ಟ ಸಮುದಾಯಗಳ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮಾತ್ರ ಈ ಭವನದಲ್ಲಿ ಅವಕಾಶ ನೀಡಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.

ಸಮುದಾಯದ ಹಿತರಕ್ಷಣೆಗೆ ಆಗ್ರಹ

ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದ ಹಿತ ಕಾಯುವುದರೊಂದಿಗೆ ಅಕ್ರಮ ಚಟುವಟಿಕೆಗಳಿಗೆ ಬಲಿಯಾಗುವ ಯುವ ಸಮುದಾಯಗಳಿಗೆ ಕಡಿವಾಣ ಹಾಕಬೇಕು. ಮಾದಕ ವ್ಯಸನಿಗಳ ಅಕ್ರಮ ಚಟುವಟಿಕೆಯ ಸ್ಥಳವಾಗಿ ಮಾರ್ಪಟ್ಟಿರುವ ಕೊರಗರ ಸಭಾ ಭವನವನ್ನು ಇದರಿಂದ ಮುಕ್ತಗೊಳಿಸಿ, ಸ್ಥಳೀಯಾಡಳಿತ ಇದರ ಸಂಪೂರ್ಣ ನಿರ್ವಹಣೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ವಾಸುದೇವ ಮುದೂರು, ಸ್ಥಳೀಯ ಕೊರಗ ಸಮುದಾಯದ ಗೋಪಾಲ, ಸೂಲ್ಯ, ಲಿಂಗ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.