ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. 
ದಕ್ಷಿಣ ಕನ್ನಡ

ಕೊಲ್ಲೂರು ಶ್ರೀ ಮೂಕಾಂಬಿಕಾ ಮನ್ಮಹಾರಥೋತ್ಸವ

ವಿಜಯವಾಣಿ ಸುದ್ದಿಜಾಲ ಬೈಂದೂರು
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ಮನ್ಮಹಾರಥೋತ್ಸವ ಗುರುವಾರ ಜರುಗಿತು. ದೇಗುಲದ ತಂತ್ರಿ ಕೆ.ಎನ್.ಸುಬ್ರಹ್ಮಣ್ಯ ಅಡಿಗ ನೇತೃತ್ವದಲ್ಲಿ ಮುಹೂರ್ತ ಮಂಗಳಾರತಿ, ಪಂಚಾಮೃತ ಅಭಿಷೇಕ, ಕ್ಷಿಪ್ರಬಲಿ, ವಿಶೇಷ ಭೂತ ಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಮಧ್ಯಾಹ್ನ ದೇಗುಲದ ಭೋಜನಶಾಲೆಯಲ್ಲಿ ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ಮಹಾಲಕ್ಷ್ಮೀ ರೆಸಿಡೆನ್ಸಿ ಅವರ ಸೇವಾರ್ಥವಾಗಿ ನಾಲ್ಕು ಲಕ್ಷ ರೂ. ಮೊತ್ತದ ಹೂವುಗಳನ್ನು ರಥಬೀದಿಯಲ್ಲಿ ಹಾಕಿ ರಥೋತ್ಸವದ ಮೆರುಗು ಹೆಚ್ಚಿಸಿದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ವಾರ್ಗದರ್ಶನದಲ್ಲಿ ದೇಗುಲ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುವಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಸದಸ್ಯರಾದ ಕೆ.ನಿತ್ಯಾನಂದ ಅಡಿಗ, ರುರಾಮ ದೇವಾಡಿಗ, ಯು.ರಾಜೇಶ ಕಾರಂತ್, ಅಭಿಲಾಷ್ ಪಿ.ವಿ., ಸುರೇಂದ್ರ ಶೆಟ್ಟಿ, ಮಹಾಲಿಂಗ ನಾಯ್ಕ, ಧನಾಕ್ಷಿ ವಿಶ್ವನಾಥ, ಸುಧಾ ಕೆ.ಉಸ್ತುವಾರಿ ವಹಿಸಿದ್ದರು. ಅರ್ಚಕ ವೃಂದ, ದೇಗುಲದ ಸಿಬ್ಬಂದಿ ಹಾಗೂ ಸ್ಥಳೀಯಾಡಳಿತ ಸಹಕಾರ ನೀಡಿದರು.

ವಿದ್ಯುದ್ದೀಪ, ತಳಿರು ತೋರಣಗಳ ಅಲಂಕಾರ

ವಾರ್ಷಿಕ ಉತ್ಸವ ಸಂಭ್ರಮದಲ್ಲಿ ಶ್ರೀ ಮೂಕಾಂಬಿಕೆ ದೇವಸ್ಥಾನ ಹಾಗೂ ಕೊಲ್ಲೂರು ಪೇಟೆ ತುಂಬಾ ಬಗೆಬಗೆಯ ವಿದ್ಯುದ್ದೀಪ, ತಳಿರು ತೋರಣಗಳಿಂದ ಅಲಂಕೃತಗೊಳಿಸಲಾಗಿತ್ತು. ಅಲ್ಲಲ್ಲಿ ಸ್ವಾಗತ ಫಲಕಗಳನ್ನು ಅಳವಡಿಸಲಾಗಿತ್ತು. ಜಾತ್ರೆಗಾಗಿ ಹತ್ತು ಹಲವು ಬಗೆಯ ಅಂಗಡಿ ಮುಂಗಟ್ಟುಗಳು ವ್ಯಾಪಾರಕ್ಕಾಗಿ ಸಿದ್ಧಗೊಂಡಿತ್ತು. ಜನದಟ್ಟಣೆ ಹಾಗೂ ವಾಹನ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಬಿಗು ಪೊಲೀಸ್ ಬಂದೋಬಸ್ತ್ ವಾಡಲಾಗಿತ್ತು. ರಾಜ್ಯ, ಹೊರ ರಾಜ್ಯಗಳಲ್ಲದೆ ದೇಶ- ವಿದೇಶಗಳಿಂದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.