ಮೂಡುಬಿದಿರೆ ಧವಳಾ ಕಾಲೇಜಿನಲ್ಲಿ ಜ್ಞಾನ ವಿಕಾಸ ತಾಲೂಕುಮಟ್ಟದ ಮಹಿಳಾ ವಿಚಾರಗೋಷ್ಠಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಿದರು. 
ದಕ್ಷಿಣ ಕನ್ನಡ

ಧರ್ಮಸ್ಥಳ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ : ಕೆ.ಅಭಯಚಂದ್ರ ಜೈನ್

ಸೌಮ್ಯ ಆರ್

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಿಗೆ ಸ್ವಾವಲಂಬನೆಯ ಶಕ್ತಿ ನೀಡಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಮೂಡುಬಿದಿರೆ ತಾಲೂಕು ವತಿಯಿಂದ ಧವಳಾ ಕಾಲೇಜಿನಲ್ಲಿ ಭಾನುವಾರ ನಡೆದ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ತಾಲೂಕುಮಟ್ಟದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ತಾನು ಶಾಸಕನಾಗಿದ್ದಾಗ ಕಾರ್ಕಳ ತಾಲೂಕಿನಲ್ಲಿದ್ದ ಈ ಯೋಜನೆಯ ಕೇಂದ್ರವನ್ನು ಮೂಡುಬಿದಿರೆಗೆ ವಿಸ್ತರಿಸಲು ಡಾ.ವೀರೇಂದ್ರ ಹೆಗ್ಗಡೆಯವರ ಬಳಿ ಮನವಿ ಮಾಡಿದ್ದೆ. ಈ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆದಾಯ ಗಳಿಸಲು, ರಾಜಕೀಯಕ್ಕೆ ಪ್ರವೇಶಿಸಲು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡಲು ಸಹಕಾರಿಯಾಗಿದೆ ಎಂದರು.

ಡಿಜೆವಿವಿ ಸಂಘದ ಸಂಚಾಲಕ ಕೆ.ಹೇಮರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಪ್ರತಿಭಾ ಪೋಕ್ಸೋ ಕಾಯಿದೆ, ಸೈಬರ್ ಕ್ರೈಮ್, ಆನ್‌ಲೈನ್ ವಂಚನೆ ಮತ್ತು ಡಿಜಿಟಲ್ ಸ್ಕಾೃಮ್ ಕುರಿತು ಮಾಹಿತಿ ನೀಡಿದರು.

ನಿವೃತ್ತ ಪ್ರಾಂಶುಪಾಲೆ ಪ್ರೊ.ಮಿತ್ರ ಪ್ರಭಾ ಹೆಗ್ಡೆ ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ್, ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಯೋಜನೆಯ ತಾಲೂಕು ಯೋಜನಾಧಿಕಾರಿ ಬಿ.ಧನಂಜಯ ಸ್ವಾಗತಿಸಿದರು. ಸಿಂಚನಾ ಜ್ಞಾನ ವಿಕಾಸ ಕೇಂದ್ರ, ಕರಿಯನಂಗಡಿ ಸದಸ್ಯೆ ಪದ್ಮಾವತಿ ಮತ್ತು ಧನಲಕ್ಷ್ಮೀ ಜ್ಞಾನ ವಿಕಾಸ ಕೇಂದ್ರ ಮೂಡುಕೊಣಾಜೆ ಸದಸ್ಯೆ ಲತಾ ಹೆಗ್ಡೆ ಅನಿಸಿಕೆ ಹಂಚಿಕೊಂಡರು. ಲೆಕ್ಕ ಪರಿಶೋಧಕ ನಾಗೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿದ್ಯಾ ವಂದಿಸಿದರು. ವಿಚಾರಗೋಷ್ಠಿಯ ನಂತರ ಜ್ಞಾನ ವಿಕಾಸ ಮಹಿಳಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪುಷ್ಪಗುಚ್ಛ ಸ್ಪರ್ಧೆಗಳು ನಡೆದವು.