ಮಂಗಳೂರಿನಲ್ಲಿ ಕೇರಳ ಡಿಐಜಿಪಿ ಸಭೆ ಅಪರಾಧ ಪ್ರಕರಣಗಳ ಮಾಹಿತಿ ವಿನಿಮಯ
ಮಂಗಳೂರು: ಕೇರಳ ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಶನಿವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆಯಿತು.
ಕೇರಳ ಕಣ್ಣೂರು ವಲಯದ ಡಿಐಜಿಪಿ ಯತೀಶ್ಚಂದ್ರ ಜಿ. ಹೆಚ್, ಕಾಸರಗೋಡು ಎಸ್ಪಿ ವಿಜಯ ಭರತ್ ರೆಡ್ಡಿ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಸುಧೀರ್ ಕುಮಾರ್ ರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು.
ಉಭಯ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ನಡೆಯುವ ಅಪರಾಧ ಪ್ರಕರಣಗಳ ಮಾಹಿತಿ ವಿನಿಮಯ ಮಾಡಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳು, ವಾರಂಟ್ ಅಸಾಮಿಗಳು, ಅಂತರ್ ರಾಜ್ಯ ಅಪರಾಧ ಪ್ರಕರಣಗಳು, ಮಾದಕದ್ರವ್ಯ ಸಾಗಾಟ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಎರಡೂ ರಾಜ್ಯಗಳಲ್ಲಿ ದಾಖಲಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಗಡಿ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಮತ್ತು ವಾರಂಟ್ ಅಸಾಮಿಗಳ ಮಾಹಿತಿ ವಿನಿಮಯ ಮತ್ತು ಪತ್ತೆಯ ಬಗ್ಗೆ ಕಾರ್ಯಯೋಜನೆಯನ್ನು ರೂಪಿಸಲಾಗಿದ್ದು, ಅಪರಾಧ ಪ್ರಕರಣಗಳ ನಿಯಂತ್ರಣ ಮತ್ತು ಪತ್ತೆ ಕಾರ್ಯದಲ್ಲಿ ಪರಸ್ಪರ ಸಹಕಾರ, ಜಂಟಿ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಿ, ವಿಚಾರ ವಿನಿಮಯ ನಡೆಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.