ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಇರುವ ಹಳೇ ಸೇತುವೆ.
- ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣ
- ಹಳೇ ಬ್ರಿಡ್ಜ್‌ನ ಅಲ್ಲಲ್ಲಿ ಹೊಂಡ
- ತುರ್ತು ಕ್ರಮಕ್ಕೆ ಜನಾಗ್ರಹ
ಇದು ಅತ್ಯಂತ ಹಳೇ ಸೇತುವೆಯಾಗಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾಗಿದೆ. ಅಕ್ಟೋಬರ್ 9, 1939ರಲ್ಲಿ ಆಗಿನ ಮೈಸೂರು ಸರ್ಕಾರದಲ್ಲಿ ದಿವಾನರಾಗಿದ್ದ ಮಿರ್ಝ ಮೊಹಮ್ಮದ್ ಇಸ್ಮಾಯಿಲ್ ಸೇತುವೆ ಲೋಕಾರ್ಪಣೆ ಮಾಡಿದ್ದು, 73,200 ರೂ. ಅನುದಾನದಲ್ಲಿ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣಗೊಂಡು ಇದೀಗ 87 ವರ್ಷವಾಗಿದೆ. 80 ವರ್ಷದ ಹಿಂದಿನ ಧಾರಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ಸೇತುವೆ ನಿರ್ಮಾಣವಾಗಿದೆ. ಈಗಿನ ವಾಹನ ಸಂಚಾರ ಹೆಚ್ಚಾಗಿದ್ದು ಧಾರಣಾ ಸಾಮರ್ಥ್ಯಕ್ಕೆ ಸವಾಲಾಗಿದೆ.
ಆಗಾಗ ವಾಹನ ದಟ್ಟಣೆ, ಬ್ಲಾಕ್
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಬ್ರಹ್ಮಕಲಶೋತ್ಸವ ಸಂದರ್ಭ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ ಮಂಗಳೂರು ಕಡೆಯಿಂದ ದೇವಸ್ಥಾನಕ್ಕೆ ಸಂಪರ್ಕಿಸುವ ಸಂದರ್ಭ ನಂದಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮಾತ್ರ ಅತ್ಯಂತ ಹಳೆಯದಾಗಿದ್ದು ಅಗಲ ಕಿರಿದೂ ಆಗಿದೆ. ಈ ಬಗ್ಗೆ ಶಾಸಕರಿಗೆ ಮನವಿ ನೀಡಲಾಗಿದ್ದು, ಆದಷ್ಟು ಬೇಗ ಸೇತುವೆ ನಿರ್ಮಾಣ ಮಾಡುವುದು ಅತ್ಯಗತ್ಯ.