ಸಿಪಿಸಿಆರ್‌ಐ 110ನೇ ಸಂಸ್ಥಾಪನಾ ದಿನಾಚರಣೆಯನ್ನು ಕೇರಳ ಕೇಂದ್ರೀಯ ವಿವಿ ಕುಲಪತಿ ಡಾ.ಸಿದ್ದು ಪಿ.ಅಲ್ಗೂರ್ ಉದ್ಘಾಟಿಸಿದರು. 
ದಕ್ಷಿಣ ಕನ್ನಡ

ಸಂಶೋಧನೆ ಕೃಷಿ ಅಭಿವೃದ್ಧಿಗೆ ಪೂರಕ : ಪ್ರೊ.ಸಿದ್ದು ಪಿ.ಅಲ್ಗೂರ್ ಅಭಿಪ್ರಾಯ

ಸಂಶೋಧನೆ, ತಂತ್ರಜ್ಞಾನ ಏಕೀಕರಣ, ವಿಜ್ಞಾನಿಗಳ ನಡುವಿನ ಸಹಯೋಗ ಮತ್ತು ಮೊಬೈಲ್ ತಂತ್ರಜ್ಞಾನದ ಮೂಲಕ ವಿತರಿಸಲಾದ ಡೇಟಾ ವಿಶ್ಲೇಷಣೆ, ಮುನ್ಸೂಚಕ ಮಾದರಿ ಮತ್ತು ನಿಖರತೆಯ ಬಳಕೆ ಭವಿಷ್ಯದಲ್ಲಿ ಕೃಷಿ ಅಭಿವೃದ್ಧಿಗೆ ಪೂರಕವಾಗಲಿವೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಕ್ಯಾಂಪಸ್ ಕುಲಪತಿ ಪ್ರೊ.ಸಿದ್ದು ಪಿ.ಅಲ್ಗೂರ್ ಹೇಳಿದರು.
ಕಾಸರಗೋಡಿನ ಐಸಿಎಆರ್ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಐಸಿಎಆರ್-ಸಿಪಿಸಿಆರ್‌ಐ)ದ 110ನೇ ಸಂಸ್ಥಾಪನಾ ದಿನಾಚರಣೆ ಹಾಗೂ ತೋಟಗರಿಕಾ ಬೆಳೆಗಳ ವಿಚಾರಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಮಾತನಾಡಿ, ಹವಾಮಾನ ಬದಲಾವಣೆಯ ಹೊಂದಾಣಿಕೆ, ಸಂಪನ್ಮೂಲ ದಕ್ಷತೆ, ಕೀಟ ಮತ್ತು ರೋಗ ನಿರ್ವಹಣೆ, ಮೌಲ್ಯವರ್ಧನೆ, ಯಾಂತ್ರೀಕರಣ, ಇಂಗಾಲದ ಸೀಕ್ವೆಸ್ಟ್ರೇಶನ್ ಮತ್ತು ರೈತರ ಆದಾಯ ಹೆಚ್ಚಿಸುವ ತಂತ್ರಗಳು ಸೇರಿದಂತೆ ಸಿಂಪೋಸಿಯಂನ ಉದ್ದೇಶದ ಬಗ್ಗೆ ವಿವರಿಸಿದರು.
ಎಸ್‌ಒಪಿಒಪಿಆರ್‌ಒಡಿ ಅಧ್ಯಕ್ಷ ಡಾ.ಪಿ.ರೆಥಿನಮ್ ಅವರು ಸ್ಥಳೀಯ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಬೆಳೆಗಳನ್ನು ಆಯ್ಕೆ ಮಾಡುವುದು ಕೃಷಿ ಅಭಿವೃದ್ಧಿಗೆ ಪೂರಕವಾಗಿರುವುದಾಗಿ ತಿಳಿಸಿದರು. ಪುತ್ತೂರಿನ ಐಸಿಎಆರ್- ಡಿಸಿಆರ್ ನಿರ್ದೇಶಕ ಡಾ.ಜೆ.ದಿನಕರ ಅಡಿಗ, ಐಸಿಎಆರ್- ಐಐಒಪಿಆರ್ ಪೆಡವೇಗಿಯ ನಿರ್ದೇಶಕ ಡಾ.ಕೆ.ಸುರೇಶ್, ಐಸಿಎಆರ್- ಸಿಪಿಸಿಆರ್‌ಐ ಮಾಜಿ ನಿರ್ದೇಶಕ ಡಾ.ಕೆ.ಯು.ಕೆ.ನಂಬೂದಿರಿ, ಆರ್‌ಆರ್‌ಐಐ ಕೊಟ್ಟಾಯಂ ನಿರ್ದೇಶಕ ಡಾ.ದೇಬಬ್ರತಾ ರಾಯ್, ಐಸಿಎಆರ್ ಐಸಿಸಿಆರ್ ಐ ನಿರ್ದೇಶಕ ಡಾ.ಸೆಂಥಿಲ್‌ಕುಮಾರ್, ವಿಪಿಎಎಸ್‌ಐ ನಿರ್ದೇಶಕ ಜೆ.ವಾಲ್ಪಾ ರೈ, ಮೈಲಪುದಂಪಾರ ಐಸಿಆರ್ ನಿರ್ದೇಶಕಿ ಡಾ.ಎ.ಬಿ.ರೇಮಾಶ್ರೀ ಉಪಸ್ಥಿತರಿದ್ದರು.
ತೆಂಗಿನಕಾಯಿ ಆಧಾರಿತ ವಿವಿಧ ಉತ್ಪನ್ನ ಬಿಡುಗಡೆಗೊಳಿಸಲಾಯಿತು. ಕೃಷಿ ವಲಯಕ್ಕೆ ಉತ್ತಮ ಕೊಡುಗೆ ನೀಡಿದವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಕೃಷ್ಯುತ್ಪನ್ನಗಳ ಪ್ರದರ್ಶನ, ಮಾರಾಟ ವ್ಯವಸ್ಥೆ ಆಯೋಜಿಸಲಾಗಿತ್ತು. ಪ್ರಧಾನ ವಿಜ್ಞಾನಿ ಮತ್ತು ಸಾಮಾನ್ಯ ಸಂಚಾಲಕ ಡಾ.ರವಿ ಭಟ್ ಸ್ವಾಗತಿಸಿದರು. ಡಾ.ಕೆ.ಪೊನ್ನುಸ್ವಾಮಿ ವಂದಿಸಿದರು.
"

ಹವಾಮಾನ ವೈಪರೀತ್ಯದಿಂದ ಉಂಟಾಗುವ ಅಪಾಯ, ಬೆಲೆ ಏರಿಳಿತ ಮತ್ತು ಕಾರ್ಮಿಕರ ಕೊರತೆ ಸೇರಿದಂತೆ ತೋಟಗಾರಿಕೆ ವಲಯ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಮಗ್ರ ಅವಲೋಕನ ನಡೆಸಬೇಕಾದ ಅಗತ್ಯವಿದೆ.