ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಟಿ.ಎನ್.ಸೀತಾರಾಮ್, ಅಭಯಚಂದ್ರ ಜೈನ್, ಡಾ.ತಾಳ್ತಜೆ ವಸಂತ ಕುಮಾರ್, ಡಾ.ಹಳೇಮನೆ ರಾಜಶೇಖರ, ಡಾ.ಕಾ.ವೆಂ.ಶ್ರೀನಿವಾಸ ಮೂರ್ತಿ, ಡಾ.ಕೆ.ಎಸ್.ಚೈತ್ರಾ ಅವರನ್ನು ಗೌರವಿಸಲಾಯಿತು. 
ದಕ್ಷಿಣ ಕನ್ನಡ

ಕಾರಂತರು ಸಾಹಿತ್ಯ ಕ್ಷೇತ್ರದ ಸೆಲೆಬ್ರಿಟಿ

ಪುರಸ್ಕಾರ ಪ್ರದಾನ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಕಾರಂತರು ಸಮಾಜ ವಿಜ್ಞಾನಿ, ಮನೋವಿಜ್ಞಾನಿ, ಸಾಹಿತ್ಯ ಕ್ಷೇತ್ರದ ಸೆಲೆಬ್ರಿಟಿಯಾಗಿದ್ದರು. ಯುವಜನತೆ ಸಾಹಿತ್ಯ, ಸಂಸ್ಕೃತಿಯಿಂದ ದೂರವಾಗಿ ರೀಲ್ಸ್ ಮೂಲಕ ಮನರಂಜನೆ ಪಡೆಯುತ್ತಿದ್ದು, ಪ್ರಾಧ್ಯಾಪಕರು ಕಾರಂತರ ಸಾಹಿತ್ಯ ಓದಲು ಅವರನ್ನು ಪ್ರೇರೇಪಿಸಬೇಕು ಎಂದು ನಿರ್ದೇಶಕ ಟಿ.ಎನ್.ಸೀತಾರಾಮ್ ಹೇಳಿದರು.

ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಮಹಾವೀರ ಕಾಲೇಜಿನಲ್ಲಿ 2025ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಡಾ.ತಾಳ್ತಜೆ ವಸಂತ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವರಾಮ ಕಾರಂತ ಪ್ರಶಸ್ತಿ ಪೀಠದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಉಪಾಧ್ಯಕ್ಷ ಕೆ.ಶ್ರೀಪತಿ ಭಟ್, ಕೋಶಾಧಿಕಾರಿ ಕೆ.ಕೃಷ್ಣರಾಜ ಹೆಗ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಧನಂಜಯ ಕುಂಬ್ಳೆ, ವೇಣುಗೋಪಾಲ ಶೆಟ್ಟಿ, ಭಾನುಮತಿ ಶೀನಪ್ಪ, ರಾಜಾರಾಮ ಮೂಡುಬಿದಿರೆ, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಮಹಾವೀರ ಕಾಲೇಜು ಪ್ರಾಂಶುಪಾಲ ಡಾ.ರಾಧಾಕೃಷ್ಣ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ್ ಮಾವಿನಕುಳಿ ನಿರ್ವಹಿಸಿದರು.

ಪ್ರಶಸ್ತಿ ಪ್ರದಾನ

ಟಿ.ಎನ್.ಸೀತಾರಾಮ್, ಹಿರಿಯ ಸಾಹಿತಿ ಡಾ.ತಾಳ್ತಜೆ ವಸಂತ ಕುಮಾರ್, ಮೂಡುಬಿದಿರೆ ಸಮಾಜ ಮಂದಿರ ಸಭಾದ ಅಧ್ಯಕ್ಷ ಅಭಯಚಂದ್ರ ಜೈನ್ ಅವರಿಗೆ ತಲಾ 20 ಸಾವಿರ ರೂ. ನಗದು, ಪ್ರಶಸ್ತಿ ಪತ್ರದೊಂದಿಗೆ ಶಿವರಾಮ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಸಾಹಿತಿಗಳಾದ ಡಾ.ಹಳೇಮನೆ ರಾಜಶೇಖರ, ಡಾ.ಕಾ.ವೆಂ.ಶ್ರೀನಿವಾಸ ಮೂರ್ತಿ, ಡಾ.ಕೆ.ಎಸ್.ಚೈತ್ರಾ ಅವರಿಗೆ ತಲಾ 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರದೊಂದಿಗೆ ಶಿವರಾಮ ಕಾರಂತ ಪುರಸ್ಕಾರ ಪ್ರದಾನ ಮಾಡಲಾಯಿತು. ಅಭಯಚಂದ್ರ ಜೈನ್ ಪ್ರಶಸ್ತಿ ಮೊತ್ತದ 20 ಸಾವಿರ ರೂ.ಗಳನ್ನು ಸಮಿತಿಗೆ ವಾಪಸ್ ನೀಡಿ, ಸಮಿತಿಗೆ ವೈಯಕ್ತಿಕವಾಗಿ 20 ಸಾವಿರ ರೂ. ನೀಡುವುದಾಗಿ ಘೋಷಿಸಿದರು.