ಕಂಬಳ ಕೋಣಗಳ ಆಯ್ಕೆಗೆ ಸಂಬಂಧಿಸಿ ನೋಂದಣಿ ಪತ್ರವನ್ನು ಶಾಸಕ ಅಶೋಕ್ ಕುಮಾರ್ ರೈ ಬಿಡುಗಡೆಗೊಳಿಸಿದರು. ದೇವಿಪ್ರಸಾದ್ ಶೆಟ್ಟಿ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಅ.18-19 ಮೈಸೂರು ದಸರಾದಲ್ಲಿ ಕಂಬಳ ಆಕರ್ಷಣೆ

ತುಳುನಾಡಿನ ಪರಂಪರೆ ಅನಾವರಣಕ್ಕೆ ಸಿದ್ಧತೆ

ಮಂಗಳೂರು: ಸರ್ಕಾರದ ವತಿಯಿಂದ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳ ಈ ಬಾರಿ ಮೈಸೂರು ದಸರಾದಲ್ಲಿ ಅ.18 ಮತ್ತು 19ರಂದು ಆಯೋಜಿಸಲಾಗುತ್ತಿದ್ದು, 20 ಎಕರೆ ಪ್ರದೇಶದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಸರ್ಕೀಟ್ ಹೌಸ್‌ನಲ್ಲಿ ಶುಕ್ರವಾರ ಕಂಬಳದ ಯಜಮಾನರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯ- ದಶಮಿ’ ಹೆಸರಿನ ಕರೆಯಲ್ಲಿ ಕಂಬಳ ನಡೆಯಲಿದೆ. ಏಕಕಾಲದಲ್ಲಿ ಸುಮಾರು 15 ಸಾವಿರ ಮಂದಿ ಕಂಬಳ ವೀಕ್ಷಿಸಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಾಣವಾಗುತ್ತಿದೆ. ಎರಡು ದಿನಗಳಲ್ಲಿ ಒಟ್ಟು 25 ಲಕ್ಷ ಜನ ಕಂಬಳ ವೀಕ್ಷಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಬಳ ವೀಕ್ಷಿಸಲು ಅನುಕೂಲವಾಗುವಂತೆ ಪ್ರತಿದಿನ ಮೂರು ಅವಧಿಗಳಲ್ಲಿ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ಮೂರು ಬ್ಯಾಚ್‌ಗಳಲ್ಲಿ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಹಾಗೂ ಕಂಬಳ ಸಮಿತಿಯ ಪ್ರಮುಖರು ಈಗಾಗಲೇ ಕರಾವಳಿ ಭಾಗಕ್ಕೆ ಭೇಟಿ ನೀಡಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು, ಕೋಣಗಳ ಮಾಲೀಕರು ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಿದ್ದಾರೆ. ಕೋಣಗಳ ಮಾಲೀಕರಿಗೆ ಆಹ್ವಾನ ನೀಡುವ ಕಾರ್ಯವೂ ನಡೆದಿದೆ ಎಂದು ಅವರು ಹೇಳಿದರು.

ಕೋಣಗಳ ಪ್ರಯಾಣಕ್ಕೆ ವಿಶೇಷ ವ್ಯವಸ್ಥೆ

ಕೋಣಗಳನ್ನು ಕರಾವಳಿಯಿಂದ ಮೈಸೂರಿಗೆ ಸುರಕ್ಷಿತವಾಗಿ ಕರೆದೊಯ್ಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅ.16ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೋಣಗಳೊಂದಿಗೆ ಪ್ರಯಾಣ ಆರಂಭಿಸಿ, ಮಡಿಕೇರಿಯಲ್ಲಿ ವಿರಾಮ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಳಿಕ ಸಂಜೆ 4.30ರ ವೇಳೆಗೆ ಮೈಸೂರಿಗೆ ಪ್ರಯಾಣ ಮುಂದುವರಿಸಿ ರಾತ್ರಿ 9 ಗಂಟೆಯ ವೇಳೆಗೆ ತಲುಪುವಂತೆ ಯೋಜಿಸಲಾಗಿದೆ. ಮರುದಿನ ಅಂದರೆ ಅ.17ರಂದು ಕೋಣಗಳಿಗೆ ಸಂಪೂರ್ಣ ವಿರಾಮ ದೊರೆಯಲಿದ್ದು, ಅ.18ರಂದು ಬೆಳಗ್ಗೆ ಕಂಬಳ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಂಜೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಕೋಣಗಳ ಮಾಲೀಕರಿಗೆ ಬಹುಮಾನ ಹೆಚ್ಚಳ

ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲೀಕರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲು ಈಗಾಗಲೇ ನಿರ್ಧರಿಸಲಾಗಿದೆ. ದೊಡ್ಡ ಜೋಡಿ ಕೋಣಗಳಿಗೆ 65 ಸಾವಿರ ರೂ. ಹಾಗೂ ಸಣ್ಣ ಜೋಡಿ ಕೋಣಗಳಿಗೆ 50 ಸಾವಿರ ರೂ. ನೀಡುವ ವ್ಯವಸ್ಥೆ ಮಾಡಲಾಗಿದೆ. ಪ್ರಸಕ್ತ ಸೀನಿಯರ್ ವಿಭಾಗದಲ್ಲಿ ಪ್ರಥಮ 16 ಗ್ರಾಂ, ದ್ವಿತೀಯ 8 ಗ್ರಾಂ ಚಿನ್ನದ ಬಹುಮಾನ ನೀಡಲಾಗುತ್ತಿತ್ತು. ಇದೀಗ ಕಂಬಳ ಮಾಲೀಕರು ತೃತೀಯ ಮತ್ತು ಚತುರ್ಥ ಬಹುಮಾನವಾಗಿಯೂ ತಲಾ 8 ಗ್ರಾಂ ಚಿನ್ನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಜೂನಿಯರ್ ವಿಭಾಗದಲ್ಲಿ ಪ್ರಥಮ 8 ಗ್ರಾಂ ನೀಡುತ್ತಿದ್ದು, ಅದನ್ನು 16 ಗ್ರಾಂಗೆ ಹೆಚ್ಚಿಸಲು ದ್ವಿತೀಯ 5 ಗ್ರಾಂ ಚಿನ್ನವನ್ನೂ ಹೆಚ್ಚಳ ಮಾಡುವ ಜತೆಗೆ ತೃತೀಯ ಮತ್ತು ಚತುರ್ಥ ಬಹುಮಾನವಾಗಿಯೂ ಚಿನ್ನ ನೀಡಿ ಗೌರವಿಸುವಂತೆ ಕೋರಿದ್ದಾರೆ. ಈ ಬಗ್ಗೆ ಮೈಸೂರು ದಸರಾ ಸಮಿತಿ ನಿರ್ಧಾರ ಮಾಡಲಿದೆ ಎಂದು ಅಶೋಕ್ ರೈ ತಿಳಿಸಿದರು.

150ರಿಂದ 160 ಕೋಣಗಳ ಆಯ್ಕೆ

ಕಂಬಳದಲ್ಲಿ ಭಾಗವಹಿಸುವ ಕೋಣಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸುಮಾರು 150ರಿಂದ 160 ಕೋಣಗಳನ್ನು ಆಯ್ಕೆ ಮಾಡುವ ಉದ್ದೇಶವಿದೆ. ಆಯ್ಕೆಯಾದ ಕೋಣಗಳ ಮಾಲೀಕರ ಮನೆಗಳಿಗೆ ತೆರಳಿ ನೋಂದಣಿ ಮಾಡಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಕೋಣಗಳಿಗೆ ವಾಸ್ತವ್ಯ, ಆಹಾರ, ತಂಗುವ ಸ್ಥಳ, ನೀರು, ಶೌಚಗೃಹ ಹಾಗೂ ಸ್ನಾನಗೃಹ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗುತ್ತದೆ. ಕೋಣಗಳ ಸುರಕ್ಷತೆ ಮತ್ತು ಆರೈಕೆಗೆ ವಿಶೇಷ ಗಮನ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ವೀಕ್ಷಿಸಲು ಸುಮಾರು 25 ಲಕ್ಷ ಮಂದಿ ಆಗಮಿಸಬೇಕು ಎಂಬುದು ಆಯೋಜಕರ ಆಶಯವಾಗಿದೆ. ಕಂಬಳದ ಬಗ್ಗೆ ಮೈಸೂರಿನಲ್ಲಿ ಈಗಾಗಲೇ ಹೆಚ್ಚಿನ ಕುತೂಹಲ ಮೂಡಿದೆ. ಸುಮಾರು ಐದು ಎಕರೆ ಪ್ರದೇಶದಲ್ಲಿ ಕೋಣಗಳನ್ನು ಇರಿಸುವ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಕೋಣಗಳೊಂದಿಗೆ ಛಾಯಾಚಿತ್ರ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶವೂ ಇದೆ.
ಅಶೋಕ್ ರೈ ಶಾಸಕ

ಕರಾವಳಿ ಆಹಾರ, ಸಂಸ್ಕೃತಿ

ಕಂಬಳದ ಜೊತೆಗೆ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಆಹಾರ ಪದಾರ್ಥಗಳು ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಮೈಸೂರು ದಸರಾ ಪ್ರವಾಸಿಗರಿಗೆ ಪರಿಚಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸುಮಾರು ನಾಲ್ಕರಿಂದ ಐದು ಎಕರೆ ಪ್ರದೇಶದಲ್ಲಿ ಆಹಾರ ಮತ್ತು ವಿವಿಧ ವಸ್ತುಗಳ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ.

ಕಂಬಳ ಅಸೋಸಿಯೇಶನ್‌ನ ರಾಜ್ಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಂಬಳ ಅಕಾಡೆಮಿಯ ಸಂಸ್ಥಾಪಕ ಗುಣಪಾಲ ಕಡಂಬ ಮೊದಲಾದವರು ಉಪಸ್ಥಿತರಿದ್ದರು.