ಸೇತುವೆ ನಂಬರ್‌ 520ರ ಮಧ್ಯೆ ಕಾಣಿಸಿರುವ ಬಿರುಕು. 
ದಕ್ಷಿಣ ಕನ್ನಡ

ರೈಲ್ವೆ ಮೇಲ್ಸೇತುವೆಯಲ್ಲಿ ಗುಂಡಿ KABAKAPUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ನೆಹರು ನಗರ-ಪಡೀಲು ಸಂಪರ್ಕ ಬ್ರಿಡ್ಜ್‌
  • ಕಾಂಕ್ರೀಟ್‌ ಎದ್ದು ಆತಂಕ
  • 5.34 ಕೋಟಿ ರೂ. ವೆಚ್ಚದಲ್ಲಿ ಮರುನಿರ್ಮಾಣ
  • ಕಾಮಗಾರಿ ನಡೆದ ಎರಡೇ ವರ್ಷದಲ್ಲಿ ಕಳಪೆ ಕಾಮಗಾರಿ ಬಯಲು
ಪುತ್ತೂರು: ನೆಹರು ನಗರ- ವಿವೇಕಾನಂದ ಕಾಲೇಜು- ಪಡೀಲು ಸಂಪರ್ಕ ಕಲ್ಪಿಸುವಲ್ಲಿ ಇರುವ ರೈಲ್ವೆ ಮೇಲ್ಸೇತುವೆಯನ್ನು ಇಲಾಖೆಯು 5.34 ಕೋಟಿ ರೂಪಾಯಿ ವೆಚ್ಚದಲ್ಲಿ ಮರುನಿರ್ಮಾಣ ಮಾಡಿದ್ದು, ಎರಡು ವರ್ಷ ಕಳೆಯುತ್ತಿದ್ದಂತೆಯೇ ಸೇತುವೆಯ ಕಾಂಕ್ರೀಟ್‌ ಏಳಲಾರಂಭಿಸಿದೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು, ವಾಹನಗಳು ಸಂಚರಿಸುವ ಸೇತುವೆ ಇದಾಗಿದ್ದು, ಸಾರ್ವಜನಿಕರಲ್ಲಿ ಕಳಪೆ ಕಾಮಗಾರಿಯ ಆತಂಕ ಮೂಡಿಸಿದೆ.
ವರ್ಷದಲ್ಲೇ ಹಾನಿ: ಸೇತುವೆ ನಿರ್ಮಾಣವಾಗಿ ವರ್ಷ ಕಳೆಯುತ್ತಿದ್ದಂತೆ ಸೇತುವೆಯ ಒಂದು ಭಾಗದ ರಸ್ತೆ ಜರಿದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಇದಾದ ಬಳಿಕ ಕೆಲವು ತಿಂಗಳಲ್ಲಿ ಇನ್ನೊಂದು ಭಾಗದ ಕಾಂಕ್ರೀಟ್‌ ಜರಿದು ¶ುಟ್‌ಪಾತ್‌ ಹಾಗೂ ರಸ್ತೆಯ ನಡುವೆ ಬಿರುಕು ಪ್ರತ್ಯಕ್ಷವಾಗಿತ್ತು. ಒಂದು ಭಾಗಕ್ಕೆ ಡಾಂಬರು ತೇಪೆ ಹಾಕಿದರೆ, ಇನ್ನೊಂದು ಭಾಗಕ್ಕೆ ವೇಗ ತಡೆಯನ್ನು ಅಳವಡಿಸಿ ಕಳಪೆ ಕಾಮಗಾರಿಯನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು.
ಈಗ ಸೇತುವೆಯ ಮಧ್ಯಭಾಗದ ಕಾಂಕ್ರೀಟ್‌ನಲ್ಲಿ ವೃತ್ತಾಕಾರವಾಗಿ ಕಾಂಕ್ರೀಟ್‌ ತುಂಡಾಗಿ ಎದ್ದು ಬರಲಾರಂಭಿಸಿದ್ದು ಕಾಮಗಾರಿಯ ಗುಣಮಟ್ಟದ ಮೇಲೆ ತೀವ್ರ ಅನುಮಾನ ಮೂಡಿಸುವಂತೆ ಮಾಡಿದೆ. ಕಣ್ಣಮುಂದೆಯೇ ಸಮಸ್ಯೆ ಇದ್ದರೂ ಯಾರೂ ಚಕಾರ ಎತ್ತುತ್ತಿಲ್ಲ. ಘಟಾನುಘಟಿ ನಾಯಕರು ನಿತ್ಯ ಈ ರಸ್ತೆಯಲ್ಲಿ ಸಂಚರಿಸಿದರೂ ಕಾಮಗಾರಿಯ ಕಳಪೆಯನ್ನು ಪ್ರಶ್ನಿಸುತ್ತಿಲ್ಲ.
ಮತ್ತೆ ಅವೈಜ್ಞಾನಿಕ ಕಾಮಗಾರಿ: ಮೇಲ್ಸೇತುವೆಯಿಂದ ಕಾಲೇಜಿನ ಕಡೆಗೆ ಸಾಗುವ ಹಾದಿಯಲ್ಲಿ ಕಾಂಕ್ರೀಟ್‌ ಜರಿದಿದ್ದ ಜಾಗಕ್ಕೆ ಡಾಂಬರು ಹಾಕಲಾಗಿತ್ತು. ನಂತರ ಅದು ಕೂಡ ಜರಿದು ನೀರು ನಿಂತು ಪಾದಚಾರಿಗಳಿಗೆ ಸಮಸ್ಯೆಯಾಗಿತ್ತು. ಈ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಪರಿಶೀಲನೆ ನಡೆಸಿ ಸೂಚನೆಯ ಮೇರೆಗೆ ಕಾಂಕ್ರೀಟ್‌ ಹಾಕಲಾಗಿತ್ತು. ಆದರೆ ಈ ಕಾಮಗಾರಿಯೂ ಅವೈಜ್ಞಾನಿಕವಾಗಿ ನಡೆದ ಕಾರಣ ವಾಹನ ಸಂಚಾರ ಮತ್ತಷ್ಟು ಕಿರಿಕಿರಿಯಾಗಿ ಪರಿಣಮಿಸಿದೆ.
ಸೇತುವೆಯ ಒಂದು ಭಾಗದಲ್ಲಿ ಸೃಷ್ಟಿಯಾಗಿರುವ ಗುಂಡಿಯಲ್ಲಿ ಕೆಲವು ದಿನಗಳ ಹಿಂದೆ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು.

ಹೊಸ ಸೇತುವೆ ನಿರ್ಮಾಣ

ಬಂಟ್ವಾಳ- ಕಬಕ ಪುತ್ತೂರು ರೈಲ್ವೆ ನಿಲ್ದಾಣದ ನಡುವಿನಲ್ಲಿ ಬರುವ ಸೇತುವೆ ನಂಬರ್‌ 520ರಲ್ಲಿ ನಿತ್ಯ 10 ಸಾವಿರಕ್ಕೂ ಅ˜ಕ ವಿದ್ಯಾರ್ಥಿಗಳು ಸಾಗುತ್ತಾರೆ. ಪುತ್ತೂರು ಪೇಟೆಗೆ ಹೋಗದೆ ನೇರವಾಗಿ ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕ ಕಲ್ಪಿಸುವ ಹೊರವರ್ತುಲ ರಸ್ತೆಯಾಗಿರುವುದರಿಂದ ವಾಹನಗಳ ಓಡಾಟವೂ ಹೆಚ್ಚಾಗಿದೆ. ಬೊಳುವಾರು ಹಾಗೂ ಹಾರಾಡಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಇದೇ ರಸ್ತೆಯನ್ನು ಬಳಸಲಾಗುತ್ತಿದೆ. ರೈಲ್ವೆ ಮೇಲ್ಸೇತುವೆ ಅಗಲೀಕರಣಗೊಂಡು 2024ರ ಮೇ ತಿಂಗಳಲ್ಲಿ ಉದ್ಘಾಟನೆ ನಡೆದಿತ್ತು.

ವಿಜಯವಾಣಿ ವರದಿ

2024ರ ಜುಲೈ ಮೊದಲ ವಾರ ಮಳೆಯ ನಡುವಿನಲ್ಲೇ ಕೊಡೆಗಳನ್ನು ಹಿಡಿದುಕೊಂಡು ಫುಟ್‌ಪಾತ್‌ಗಳಿಗೆ ಸಿಮೆಂಟ್‌ ಹಾಕಲಾಗಿತ್ತು. ಈ ಬಗ್ಗೆ ವಿಜಯವಾಣಿಯಲ್ಲಿ ವಿಶೇಷ ವರದಿಯನ್ನು ಪ್ರಕಟಿಸಲಾಗಿತ್ತು. 2025ರ ಆಗಸ್ಟ್‌ನಲ್ಲಿ ಮೇಲ್ಸೇತುವೆಯ ಒಂದು ಭಾಗದ ಕಾಂಕ್ರೀಟ್‌ ಐದು ಇಂಚಿನಷ್ಟು ಜರಿದ ಬಗ್ಗೆ ವರದಿ ಮಾಡಲಾಗಿತ್ತು. ಡಿಸೆಂಬರ್‌ ಅಂತ್ಯಕ್ಕೆ ಸೇತುವೆಯ ಇನ್ನೊಂದು ಭಾಗದಲ್ಲಿಯೂ ಬಿರು ಕಾಣಿಸಿಕೊಂಡ ಬಗ್ಗೆಯೂ ವರದಿ ಪ್ರಕಟಿಸಲಾಗಿತ್ತು.
"

ರೈಲ್ವೆ ಸೇತುವೆಯ ಇಕ್ಕೆಲಗಳಲ್ಲಿ ನೀರು ನಿಂತು ಮಳೆಗೆ ನಡೆದಾಡಲೂ ಆಗದಂತಹ ಸ್ಥಿತಿಯಿದೆ. ಈಗ ಸೇತುವೆಯ ಕಾಂಕ್ರೀಟ್‌ ಏಳುತ್ತಿದ್ದು ಕಾಮಗಾರಿಯ ಗುಣಮಟ್ಟದ ಬಗ್ಗೆಅನುಮಾನ ಮೂಡಿಸುತ್ತಿದೆ. ಯುವ ಸಮುದಾಯಕ್ಕೆ ಭ್ರಷ್ಟಾಚಾರ ಮಾಡಬಾರದೆಂದು ಬೋಧನೆಗೆ ಸೀಮಿತವಾಗುತ್ತಿದ್ದು, ನಿತ್ಯ ಕಳಪೆ ಕಾಮಗಾರಿಯನ್ನೇ ನೋಡುವ ಸ್ಥಿತಿಯಿದೆ.

— ವಿತೇಶ್‌, ಕಾಲೇಜು ವಿದ್ಯಾರ್ಥಿ