ಮಂಗಳೂರು: ಕರ್ತವ್ಯದ ವೇಳೆ ಹುತಾತ್ಮರಾದ ಹಾಗೂ ಕರ್ತವ್ಯ ನಿರ್ವಹಿಸುವಾಗ ಗಾಯಗೊಂಡ ಪೊಲೀಸ್ ಸಿಬ್ಬಂದಿಯ ಅಗತ್ಯಗಳನ್ನು ಪೊಲೀಸ್ ಇಲಾಖೆ ಪೂರೈಸಬೇಕು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಗದೀಶ್ ವಿ.ಎನ್. ಹೇಳಿದರು.
ಮಂಗಳೂರಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಬುಧವಾರ ಮಂಗಳೂರು ನಗರ ಪೊಲೀಸ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 7ನೇ ಬೆಟಾಲಿಯನ್ ಹಾಗೂ ವಿಶೇಷ ಕಾರ್ಯಪಡೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಗಡಿ ನುಸುಳುವಿಕೆ ಹಾಗೂ ಬಾಹ್ಯ ಬೆದರಿಕೆಗಳಿಂದ ಜನರನ್ನು ರಕ್ಷಿಸಲು ಭದ್ರತಾ ಪಡೆಗಳು ಶ್ರಮಿಸಿದರೆ, ಆಂತರಿಕ ಭದ್ರತಾ ಸಮಸ್ಯೆಗಳನ್ನು ನಿಭಾಯಿಸಲು ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸುತ್ತಾರೆ. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅನೇಕ ಪೊಲೀಸ್ ಸಿಬ್ಬಂದಿ ಪ್ರಾಣ ತ್ಯಾಗ ಮಾಡಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಹುತಾತ್ಮರ ದಿನಾಚರಣೆ ಆಚರಿಸುವುದರಿಂದ ಮಾತ್ರ ಉದ್ದೇಶ ಈಡೇರುವುದಿಲ್ಲ. ಹುತಾತ್ಮ ಪೊಲೀಸರ ಕುಟುಂಬಗಳಿಗೆ ನಾವು ನೆರವಾಗಬೇಕು. ಪೊಲೀಸ್ ಇಲಾಖೆಯು ಹುತಾತ್ಮರ ಕುಟುಂಬಗಳ ಹಾಗೂ ಕರ್ತವ್ಯದ ವೇಳೆ ಗಾಯಗೊಂಡ ಸಿಬ್ಬಂದಿಯ ಅಗತ್ಯಗಳನ್ನು ಪೂರೈಸಬೇಕು ಎಂದು ನ್ಯಾಯಾಧೀಶರು ತಿಳಿಸಿದರು.
ಇದಕ್ಕೂ ಮುನ್ನ ನ್ಯಾಯಾಧೀಶ ಜಗದೀಶ್ ಅವರು ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಚೇತನ್ ಆರ್., ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅರುಣ್, ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
2025ರ ಸೆಪ್ಟೆಂಬರ್ನಿಂದ 2026ರ ಆಗಸ್ಟ್ವರೆಗಿನ ಅವಧಿಯಲ್ಲಿ ದೇಶದಾದ್ಯಂತ ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ 154 ಪೊಲೀಸ್ ಸಿಬ್ಬಂದಿಯ ಹೆಸರುಗಳನ್ನು ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಸ್ಯಾಮ್ ವರ್ಗೀಸ್ ವಾಚಿಸಿದರು. ಅವರಲ್ಲಿ ಕರ್ನಾಟಕದ ಐವರು ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ.
ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಗೌರವ ವಂದನೆ ಸಲ್ಲಿಸಲಾಯಿತು. ಪೊಲೀಸ್ ಧ್ವಜವನ್ನು ಕೆಳಗಿಳಿಸಿ ಬಳಿಕ ಮತ್ತೆ ಧ್ವಜಸ್ತಂಭದ ತುದಿಗೆ ಏರಿಸಲಾಯಿತು. ಜಿಲ್ಲಾ ನ್ಯಾಯಾಧೀಶರಿಗೆ ಗೌರವ ರಕ್ಷೆ ನೀಡಲಾಯಿತು.