ಸಜೀಪನಡು ದೇರಾಜೆ ಮನೆ ಅಶೋಕ್ 
ದಕ್ಷಿಣ ಕನ್ನಡ

ಚಿನ್ನಾಭರಣ ಕಳವು ಆರೋಪಿ 24 ಗಂಟೆಯಲ್ಲಿ ಬಂಧನ

ಮಂಗಳೂರು : ಕಾವೂರು ಉಲ್ಲಾಸ ನಗರದ ಮನೆಯೊಂದರಿಂದ 4.80 ಲಕ್ಷ ರೂ. ಮೌಲ್ಯದ 39 ಗ್ರಾಂ ಚಿನ್ನಾಭರಣ ಹಾಗೂ 182 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ಸಜೀಪನಡು ದೇರಾಜೆ ಮನೆ ನಿವಾಸಿ ಅಶೋಕ್ (41) ಬಂಧಿತ ಆರೋಪಿ. ಕಳವು ಮಾಡಲಾದ ಎಲ್ಲ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದ್ದು, ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಮಾ.7ರಂದು ಮಧ್ಯಾಹ್ನ 12 ಗಂಟೆ ವೇಳೆಗೆ ಕಾವೂರು ಉಲ್ಲಾಸ ನಗರದಲ್ಲಿ ಮನೆಯೊಂದಕ್ಕೆ ಯಾರೂ ಇಲ್ಲದ ವೇಳೆ ಬಾಗಿಲಿನ ಬೀಗ ಮುರಿದು ಕಳ್ಳ ಒಳಪ್ರವೇಶಿಸಿ ಸುಮಾರು 4,80,000 ರೂ. ಬೆಲೆಯ 39 ಗ್ರಾಂ ಚಿನ್ನಭಾರಣ, 182 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದ. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಹಾಗೂ ಸೊತ್ತು ಪತ್ತೆಗಾಗಿ ಕಾವೂರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬಂದಿಯ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಕಳವು ಮಾಡಲಾದ ಸೊತ್ತುಗಳ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.