ಜೆಸಿಐ ಬಂಟ್ವಾಳದ 2026ನೇ ಸಾಲಿನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಆಚಾರ್ಯ ಅಧಿಕಾರ ಸ್ವೀಕರಿಸಿದರು.
ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಸಾಧನೆ ಮಾಡಬೇಕು. ಬರುವ ಅಡೆತಡೆಗಳನ್ನು ಮೆಟ್ಟಿ ನಿಂತು ಮುನ್ನಡೆಯಬೇಕು. ಬದುಕಿನಲ್ಲಿ ಬರುವ ಸೋಲು ಗೆಲುವುಗಳನ್ನು ಸಮಾನಾವಾಗಿ ಸ್ವೀಕರಿಸಿಕೊಂಡು, ಹೂದೋಟದಲ್ಲಿ ಅನೇಕ ಹೂಗಳಿದ್ದರೂ ಪರಿಮಳ ಬೀರುವ ಹೂವುಗಳು ನಾವಾಗಬೇಕು ಎಂದು ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ಹೇಳಿದರು.
ಬಿ.ಸಿ.ರೋಡಿನ ರೋಟರಿ ಸಭಾಭವನದಲ್ಲಿ ಶನಿವಾರ ಜೆಸಿಐ ಬಂಟ್ವಾಳ ನೂತನ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಜೆಸಿಐ ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಪ್ರತಿಜ್ಞಾವಿಧಿ ಭೋದಿಸಿದರು. ಪ್ರಾಂತ್ಯ (ಡಿ) ಫಲ್ಗುಣಿ ವಲಯ ಉಪಾಧ್ಯಕ್ಷ ಕಾಶಿನಾಥ್ ಗೋಗಟೆ ಶುಭಾಶಂಸನೆಗೈದರು. ನೂತನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಆಚಾರ್ಯ, ಕಾರ್ಯದರ್ಶಿಯಾಗಿ ಕಿರಣ್ ಬಂಟ್ವಾಳ, ಕೋಶಾಧಿಕಾರಿಯಾಗಿ ಶಿವರಾಮ ಮರ್ತಾಜೆ, ಲೇಡಿ ಜೆಸಿ ಸಂಯೋಜಕಿಯಾಗಿ ಅನುಷಾ ಕಿಶೋರ್ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವಾಧ್ಯಕ್ಷೆ ರಶ್ಮಿ ಶೆಟ್ಟಿ, ಪೂರ್ವಾಧ್ಯಕ್ಷರಾದ ಸಂದೀಪ್ ಸಾಲ್ಯಾನ್ ಹಾಗೂ ಸದಾನಂದ ಬಂಗೇರ ಅವರನ್ನು ಗೌರವಿಸಲಾಯಿತು. ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಾವೂರು ಹಾಗೂ ಪೂರ್ವ ವಲಯ ಉಪಾಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅನಿಸಿಕೆ ವ್ಯಕ್ತಪಡಿಸಿದರು. ಕೊಡಂಗೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಗೀತಾ, ನಿರ್ಗಮನ ಕೋಶಾಧಿಕಾರಿ ಜೀವಿತಾ ಯತೀಶ್, ಲೇಡಿ ಜೇಸಿ ಸಂಯೋಜಕಿ ಬಬಿತಾ ಉಪಸ್ಥಿತರಿದ್ದರು.
ಎಲ್ಲರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಮುನ್ನಡೆದಾಗ ಯಶಸ್ವಿ ನಾಯಕನಾಗಿ ಹೊರ ಹೊಮ್ಮಲು ಸಾಧ್ಯ. ಸಮಾಜದ ಯುವಕ- ಯುವತಿಯರಿಗೆ ವ್ಯಕ್ತಿತ್ವ ವಿಕಸನ ಮಾಡುವ ಕಾರ್ಯ ಜೆಸಿಐ ಬಂಟ್ವಾಳದಿಂದ ಆಗಲಿ.