ಶಾಸಕ ವೇದವ್ಯಾಸ ಕಾಮತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿಎ ಜಗನ್ನಾಥ ಕಾಮತ್ , ಅಡಿಗೆ ಬಾಲಕೃಷ್ಣ ಶೆಣೈ ಉಪಸ್ಥಿತರಿದ್ದರು.
ಮಂಗಳೂರು: ಹರಿದ್ವಾರದಲ್ಲಿ ವೃಂದಾವನಸ್ಥರಾಗಿರುವ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಮಂಗಳೋತ್ಸವ ಜ.11ರಂದು ರಥಬೀದಿ ಶ್ರೀ ವೆಂಕಟರಮಣ ದೇವಳದಲ್ಲಿ ನಡೆಯಲಿದೆ. ಸುಮಾರು 15 ಸಾವಿರ ಭಕ್ತರು ಆಗಮಿಸಲಿದ್ದು, ಸಕಲ ಸಿದ್ಧತೆ ನಡೆಸಲಾಗಿದೆ ಎಂದು ದೇವಳದ ಮೊಕ್ತೇಸರ ಸಿಎ ಜಗನ್ನಾಥ ಕಾಮತ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೋತ್ಸವ ಸಭಾ ಕಾರ್ಯಕ್ರಮ ರಾತ್ರಿ 8.30ರಿಂದ ಕಾಶೀಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದರು.
ಅಂದು ಮಧ್ಯಾಹ್ನ 3.30ಕ್ಕೆ ಶ್ರೀ ಕಾಶೀಮಠ ಸಂಸ್ಥಾನದ ಕೊಂಚಾಡಿಯಲ್ಲಿರುವ ಶಾಖಾ ಮಠಕ್ಕೆ ಊರ, ಪರವೂರ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಅಲ್ಲಿಂದ ಭಜನಾ ಸಂಕೀರ್ತನಾ ವ್ಯಾಸಧ್ವಜ ಮತ್ತು ಸ್ವಾಮೀಜಿಯವರ ಪಾದುಕಾ ದಿಗ್ವಿಜಯ ಪಾದಯಾತ್ರೆ ಆರಂಭವಾಗಲಿದೆ. ಕೊಂಚಾಡಿಯಿಂದ ಮೇರಿಹಿಲ್ , ಯೆಯ್ಯಡಿ, ಕೆಪಿಟಿ, ಬಿಜೈ, ಲಾಲ್‌ಭಾಗ್, ಪಿವಿಎಸ್ ಜಂಕ್ಷನಿಂದ ಬಲಕ್ಕೆ ತಿರುಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ ಮೂಲಕ ಕೆನರಾ ಹೈಸ್ಕೂಲ್‌ನಲ್ಲಿ ಸೇರಲಿದೆ. ಅಲ್ಲಿ 10 ಸಾವಿರ ಮಂದಿಗೆ ಫಲಹಾರದ ವ್ಯವಸ್ಥೆ ಮಾಡಲಾಗಿದೆ. ದಾರಿಯುದ್ದಕ್ಕೂ ನಿರ್ದಿಷ್ಟ ಜಾಗಗಳಲ್ಲಿ ಪಾನೀಯದ ವ್ಯವಸ್ಥೆ ಮಾಡಲಾಗಿದೆ ಎಂದರು.
ಪಾದಯಾತ್ರೆಯಲ್ಲಿ ವಿವಿಧ ಊರ ಭಜನಾ ಮಂಡಳಿಗಳು ದೇವರ, ಸ್ವಾಮೀಜಿಯವರ ಭಜನೆ ಹಾಡುತ್ತಾ ಪಾದಯಾತ್ರೆಯಲ್ಲಿ ಸಾಗಲಿದೆ. ಚೆಂಡೆ, ಬ್ಯಾಂಡ್ ಸೆಟ್, ದೇವರ, ಮಹಾಪುರುಷರ ವೇಷಭೂಷಣಗಳನ್ನು ಧರಿಸಿದ ಮಕ್ಕಳ ಟ್ಯಾಬ್ಲೋಗಳು, ವೇದಘೋಷಗಳೊಂದಿಗೆ ಸ್ವಾಮೀಜಿಯವರ ಭಾವಚಿತ್ರ ಇರುವ ಟ್ಯಾಬ್ಲೋ, ಸ್ವಾಮೀಜಿಯವರ ಪಾದುಕೆ ಇರುವ ಟ್ಯಾಬ್ಲೋ ಸಹಿತ ವಿವಿಧ ಕಲಾ ಪ್ರಕಾರಗಳು ಪಾದಯಾತ್ರೆಯ ಶೋಭೆ ಹೆಚ್ಚಿಸಲಿದೆ.
ಕೆನರಾ ಹೈಸ್ಕೂಲ್‌ನಿಂದ ಪಾದಯಾತ್ರೆ ಮುಂದುವರಿದು ಡೊಂಗರಕೇರಿ, ನ್ಯೂಚಿತ್ರಾ, ಶ್ರೀನಿವಾಸ ಥಿಯೇಟರ್, ಸ್ವದೇಶಿ ಸ್ಟೋರ್ ತಲುಪಲಿದೆ. ಪಾದಯಾತ್ರೆಯಲ್ಲಿ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿ ಇರಲಿದೆ. ಸ್ವದೇಶಿ ಸ್ಟೋರ್ ಬಳಿಯಿಂದ ಸ್ವರ್ಣ ಲಾಲಕಿಯಲ್ಲಿ ದೇವರೊಂದಿಗೆ ಪಾದಯಾತ್ರೆ ಶ್ರೀ ವೆಂಕಟರಮಣ ದೇವಸ್ಥಾನ ತಲುಪಲಿದೆ. ಅಲ್ಲಿ ಮಂಗಳೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು.
ರಾತ್ರಿ ಭಕ್ತರಿಗೆ ಭೋಜನ ಪ್ರಸಾದ ವ್ಯವಸ್ಥೆ ಮಹಾಮಾಯಾ ದೇವಳದ ಬಳಿ, ಉಮಾಮಹೇಶ್ವರ ದೇವಳದ ಬಳಿ, ಭವಂತಿ ಸ್ಟ್ರೀಟ್‌ನಲ್ಲಿರುವ ಹಿಂದಿನ ನ್ಯೂ ಮಂಗಳೂರು ಹೆಲ್ತ್‌ಕೇರ್ ಸೆಂಟರ್ ಜಾಗಗಳಲ್ಲಿ ಮಾಡಲಾಗಿದೆ ಎಂದು ಜಗನ್ನಾಥ್ ಕಾಮತ್ ತಿಳಿಸಿದರು.
ಶಾಸಕ ವೇದವ್ಯಾಸ ಕಾಮತ್, ಶ್ರೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಪ್ರಮುಖರಾದ ಕೋಟೇಶ್ವರ ದಿನೇಶ್ ಕಾಮತ್, ವಾಸುದೇವ ಕಾಮತ್, ರಘುವೀರ್ ಭಡಾರ್ಕರ್, ಟಿ.ಗಣಪತಿ ಪೈ, ಪ್ರಶಾಂತ್ ಪೈ ಉಪಸ್ಥಿತರಿದ್ದರು.