ಗುರುಪುರ, ಕೈಕಂಬ, ವಾಮಂಜೂರು ಕೆಲವು ಗೂಡಂಗಡಿಗಳಲ್ಲಿ ಸೀಯಾಳದ ರಾಶಿ 
ದಕ್ಷಿಣ ಕನ್ನಡ

ಕರಾವಳಿಯಲ್ಲಿ ಚಳಿಗೂ ಮುಂಚೆ ಸುಡುತ್ತಿದೆ ಸೆಕೆ!

ಸೀಯಾಳ, ಕಬ್ಬಿನ ರಸ, ತಂಪುಪಾನೀಯಕ್ಕೆ ಭಾರಿ ಬೇಡಿಕೆ

ವಿಜಯವಾಣಿ ಸುದ್ದಿಜಾಲ ಗುರುಪುರ

ಮಳೆಗಾಲದ ಬಳಿಕ ಚಳಿಗಾಲವೇ ಇಲ್ಲವೋ ಎಂಬಂತೆ ಈ ವರ್ಷ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಸೆಕೆ ಬಾಧಿಸುತ್ತಿದೆ. ಜನರು ಅಬ್ಬಾ ಎಂಥಾ ಸೆಕೆ ಎಂದು ಉದ್ಗರಿಸುವಂತೆ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ಪರಿಣಾಮವಾಗಿ ಡಿಸೆಂಬರ್‌ನಿಂದ ಅನುಭವಕ್ಕೆ ಬರಬೇಕಿದ್ದ ತೀವ್ರ ತೆರನಾದ ಬಾಯಾರಿಕೆ, ದಣಿವು ಜನರಲ್ಲಿ ಈಗಲೇ ವ್ಯಕ್ತವಾಗುತ್ತಿದ್ದು, ರಸ್ತೆ ಬದಿಯ ಅಂಗಡಿಗಳಲ್ಲಿ ತಂಪು ಪಾನೀಯ, ಸೀಯಾಳ, ಕಬ್ಬಿನ ರಸಕ್ಕೆ ಬಹಳ ಬೇಡಿಕೆ ಕಂಡುಬರುತ್ತಿದೆ. ಈ ಹವಾಮಾನ ವೈಪರೀತ್ಯ ಕಂಡು ಜನರು ಚಿಂತೆಯಿಂದ ಕಂಗಾಲಾಗಿದ್ದಾರೆ.

ಮಳೆಗಾಲದ ಬಳಿಕ ಚಳಿಗಾಲ ಬರುವುದು ಸಹಜವಾಗಿದ್ದರೂ ಈ ಬಾರಿ ಚಳಿಗಾಲದಲ್ಲಿ ಸೆಕೆಗಾಲದ ಅನುಭವ. ನಡು ಮಧ್ಯಾಹ್ನ ಮನೆಯಿಂದ ಹೊರಗೆ ಬರಲಾರದಂತಹ, ಬೆವರಿ ನೀರಾಗುವಷ್ಟು ಸೆಕೆ. ಇತ್ತೀಚಿನ ಎರಡು ದಿನಗಳಲ್ಲಿ ಹಗಲಲ್ಲಿ 28ರಿಂದ 30 ಸೆಲ್ಸಿಯಸ್‌ನಷ್ಟು ಉಷ್ಣತೆ ದಾಖಲಾಗುತ್ತಿದೆ. ಕಳೆದ ಸೆಕೆಗಾಲದಲ್ಲಿ ಇಷ್ಟೊಂದು ಉಷ್ಣತೆ ಇತ್ತು. ಇಂತಹ ಹವಾಮಾನ ವೈಪರಿತ್ಯ ರೋಗರುಜಿಗಳಿಗೆ ಕಾರಣವಾಗಲಿದೆ ಎಂಬ ಭಯ ಜನರಲ್ಲಿ ವ್ಯಕ್ತವಾಗಿದೆ.

ಗುರುಪುರ, ಕೈಕಂಬ, ವಾಮಂಜೂರು ಕೆಲವು ಗೂಡಂಗಡಿಗಳಲ್ಲಿ ಸೀಯಾಳದ ರಾಶಿ ಕಂಡು ಬಂದಿದ್ದು, ಕೆಲವರಲ್ಲಿ ಊರಿನ ಬೊಂಡ, ಕೆಂದಾಳೆ ಬೊಂಡ ಮಾರಾಟಕ್ಕಿದೆ. ಕೈಕಂಬದಿಂದ ಬಜ್ಪೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಆರೇಳು ಕಬ್ಬಿನ ರಸ ಮಾರಾಟದ ಅಂಗಡಿಗಳು ತಲೆ ಎತ್ತಿವೆ. ಅಂಗಡಿಗಳ ಎದುರಿನಲ್ಲಿ ಬೆಳಗ್ಗೆ ಹಾಕಿದ ಬೊಂಡದ ರಾಶಿ ಸಂಜೆಯಾಗುತ್ತಲೇ ಖಾಲಿಯಾಗುತ್ತಿದೆ. ಕಾರುಗಳು ಮತ್ತಿತರ ವಾಹನಗಳಲ್ಲಿ ಪ್ರಯಾಣಿಸುವವರು ಹೇಳಿದ ಬೆಲೆಗೆ ಬೊಂಡ, ಕಬ್ಬಿನ ರಸ ಕುಡಿದು ಮುಂದೆ ಸಾಗುತ್ತಾರೆ. ಸಂಜೆಯಾಗುತ್ತಲೇ ಐಸ್‌ಕ್ರೀಂ ಪಾರ್ಲರ್‌ಗಳಲ್ಲಿ ಜನರ ದಂಡಿರುತ್ತದೆ. ಹೀಗೆ ಎಲ್ಲ ಅಂಗಡಿಗಳಲ್ಲೂ ಈಗ ತಂಪು ಪಾನೀಯಕ್ಕೆ ಡಿಮಾಂಡೋ ಡಿಮಾಂಡ್.

ಅಕ್ಟೋಬರ್‌ನಲ್ಲೇ ಬೇಡಿಕೆ

ಸಾಮಾನ್ಯವಾಗಿ ಡಿಸೆಂಬರ್‌ನಿಂದ ಏಪ್ರಿಲ್‌ವರೆಗೆ ಬೊಂಡ, ಕಬ್ಬಿನ ರಸ, ಲಿಂಬೆ ಸೋಡಾ-ಶರ್ಬತ್, ಐಸ್‌ಕ್ರೀಂ, ಮಜ್ಜಿಗೆ ಹಾಗೂ ಇತರ ತಂಪು ಪಾನೀಯಕ್ಕೆ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಸೆಪ್ಟೆಂಬರ್ ಅಕ್ಟೋಬರ್‌ನಲ್ಲೇ ಬೇಡಿಕೆ ಹೆಚ್ಚಾಗಿದೆ. ಕೆಲವು ದಿನ ಎಲ್ಲವೂ ಖಾಲಿಯಾಗುವಷ್ಟು ಬೇಡಿಕೆ ಇರುತ್ತದೆ. ತುಂತುರು ಮಳೆ ಬಂದರಂತೂ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚುತ್ತದೆ. ಈಗ ಬೆಲೆ ಸಾಮಾನ್ಯವಾಗಿದ್ದರೂ ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಬೊಂಡದ ಬೆಲೆ ಏರಬಹುದು ಎಂದು ಕೈಕಂಬದ ಬೊಂಡ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.